ADVERTISEMENT

ಪತ್ರಕರ್ತರು, ಹೋರಾಟಗಾರರ ಮೇಲೆ ಗೂಢಚರ್ಯೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 19:09 IST
Last Updated 31 ಅಕ್ಟೋಬರ್ 2019, 19:09 IST
   

ನವದೆಹಲಿ: ಭಾರತದ ಹಲವು ಪತ್ರಕರ್ತರು ಮತ್ತು ಮಾನವ ಹಕ್ಕು ಕಾರ್ಯಕರ್ತರ ಮೊಬೈಲ್‌ಗಳ ಮೇಲೆ ವಾಟ್ಸ್‌ಆ್ಯಪ್‌ ಮೂಲಕ ನಿಗಾ ಇರಿಸಲಾಗಿದೆ. ಅವರ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ ಎಂಬುದನ್ನು ವಾಟ್ಸ್‌ಆ್ಯಪ್‌ ಸಂಸ್ಥೆ ದೃಢಪಡಿಸಿದೆ. ಇದು ಭಾರಿ ಕಳವಳಕ್ಕೆ ಕಾರಣವಾಗಿದೆ.

ಖಾಸಗಿತನದ ಉಲ್ಲಂಘನೆಯ ಈ ಕೃತ್ಯದ ಬಗ್ಗೆ ಸೋಮವಾರದ ಒಳಗೆ ವಿವರಣೆ ನೀಡುವಂತೆ ವಾಟ್ಸ್‌ಆ್ಯಪ್‌ ಸಂಸ್ಥೆಗೆ ಕೇಂದ್ರ ಸರ್ಕಾರ ಗುರುವಾರ ಸೂಚಿಸಿದೆ.

ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಅಭಿವೃದ್ಧಿಪಡಿಸಿರುವ ಪೆಗಾಸಸ್‌ ಎಂಬ ಹೆಸರಿನ ಗೂಢಚರ್ಯೆ ತಂತ್ರಾಂಶ ಬಳಸಿ ಬಳಕೆದಾರರ ಮಾಹಿತಿ ಕದಿಯಲಾಗಿದೆ ಎಂದು ವಾಟ್ಸ್‌ಆ್ಯಪ್‌ ಒಪ್ಪಿಕೊಂಡಿದೆ ಎಂಬ ವರದಿ ಪ್ರಕಟವಾಗಿದೆ. ಅದಾದ ಬಳಿಕ, ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರವೂ ನಡೆದಿದೆ. ದೇಶದ ಪ್ರಜೆಗಳನ್ನು ಸರ್ಕಾರವು ಅಪರಾಧಿಗಳಂತೆ ನೋಡುತ್ತಿದೆ ಎಂದು ಕಾಂಗ್ರೆಸ್‌ ಪಕ್ಷ ಆರೋಪಿಸಿದೆ.

ADVERTISEMENT

ಇದಕ್ಕೆ ಸರ್ಕಾರ ತಿರುಗೇಟು ನೀಡಿದೆ. ‘ಒಂದು ಕುಟುಂಬದ ಖಯಾಲಿಗಾಗಿ ಆಗಿನ ಹಣಕಾಸು ಸಚಿವ ಪ್ರಣವ್‌ ಮುಖರ್ಜಿ ಅವರ ಕಚೇರಿಯ ಮಾಹಿತಿಯನ್ನೇ ಕಳವು ಮಾಡಲಾಗಿತ್ತು. ಅಷ್ಟೇ ಅಲ್ಲದೆ ಸೇನಾ ಮುಖ್ಯಸ್ಥರಾಗಿದ್ದ ಜ. ವಿ.ಕೆ. ಸಿಂಗ್‌ ಅವರ ಮೇಲೆಯೂ ಗೂಢಚಾರಿಕೆ ಮಾಡಲಾಗಿತ್ತು’ ಎಂದು ಕೇಂದ್ರ ಸರ್ಕಾರ ಆಪಾದಿಸಿದೆ.

ಯಾರ ಮೇಲೆ ಬೇಹುಗಾರಿಕೆ?

ಗೂಢಚರ್ಯೆ ತಂತ್ರಾಂಶ ನುಸುಳಿದೆ ಎನ್ನಲಾದ ಬಳಕೆದಾರರಿಗೆ ವಾಟ್ಸ್‌ಆ್ಯಪ್‌ ನೇರವಾಗಿ ಕರೆ ಮಾಡಿ ವಿವರ ನೀಡಿದೆ. ಹೀಗೆ ಕರೆ ಬಂದವರಲ್ಲಿ ಲೇಖಕ ಆನಂದ್‌ ತೇಲ್‌ತುಂಬ್ಡೆ, ಸಾಮಾಜಿಕ ಕಾರ್ಯಕರ್ತೆ ಬೆಲಾ ಭಾಟಿಯಾ, ವಕೀಲೆ ಶಾಲಿನಿ ಗೇರಾ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.