ADVERTISEMENT

ವರ್ಷದ ಹಿನ್ನೋಟ | ಬಾಹ್ಯಾಕಾಶ: ಇಸ್ರೊಗೆ ವರ್ಷಪೂರ್ತಿ ಸಾಧನೆಯ ಫಸಲು

ಗಾಣಧಾಳು ಶ್ರೀಕಂಠ
Published 28 ಡಿಸೆಂಬರ್ 2025, 22:50 IST
Last Updated 28 ಡಿಸೆಂಬರ್ 2025, 22:50 IST
<div class="paragraphs"><p>ರಾಕೇಟ್</p></div>

ರಾಕೇಟ್

   

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಪಾಲಿಗೆ 2025, ಸಾಧನೆಗಳ ಸಂಭ್ರಮ, ಮೈಲಿಗಲ್ಲುಗಳನ್ನು ಸಾಧಿಸಿದ ವರ್ಷ. ಎರಡು ಎಸ್‌ಪಿಇಎಕ್ಸ್‌ ಉಪಗ್ರಹಗಳ ಯಶಸ್ವಿ ಡಾಕಿಂಗ್, 100ನೇ ಉಪಗ್ರಹ ಉಡಾವಣೆ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಶತಕದ ಸಾಧನೆ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತೀಯನ ಮೊದಲ ಹೆಜ್ಜೆ, ಇಂಥ ಹಲವು ಫಸಲು ಈ ವರ್ಷ ಇಸ್ರೊದ ಸಾಧನೆಯ ಬುಟ್ಟಿಗೆ ಸೇರಿವೆ

ಮೊದಲ ‘ಜೋಡಣೆ–ಬೇರ್ಪಡಿಸುವಿಕೆ’:  ವರ್ಷಾರಂಭದಲ್ಲಿ(ಜನವರಿ 16) ಇಸ್ರೊ, ತನ್ನದೇ ಆದ ಡಾಕಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ಕಕ್ಷೆಯಲ್ಲಿ ಉಪಗ್ರಹ ಡಾಕಿಂಗ್ (ಸ್ಪೇಡೆಕ್ಸ್‌– ಎಸ್‌ಪಿ ಎಡಿಇಎಕ್ಸ್) ಪ್ರಯೋಗವನ್ನು ಯಶಸ್ವಿಯಾಗಿ ನೆರವೇರಿಸಿತು. ಇದರಲ್ಲಿ ಬಾಹ್ಯಾಕಾಶದಲ್ಲಿ ನಿರ್ದಿಷ್ಟ ಕಕ್ಷೆಯಲ್ಲಿ ತಿರುಗುವ ಒಂದು ಉಪಗ್ರಹವು ಮತ್ತೊಂದು ಉಪಗ್ರಹವನ್ನು ಶೋಧಿಸಿ ಅದಕ್ಕೆ ತಾನೇ ಜೋಡಿಸಿಕೊಳ್ಳುವ ವ್ಯವಸ್ಥೆ ಇದು. ಈ ಪ್ರಯೋಗದ ಮೂಲಕ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ, ರಷ್ಯಾ, ಚೀನಾ  ರಾಷ್ಟ್ರಗಳ ಗುಂಪಿಗೆ ಭಾರತ ಸೇರಿತು.  ಇದೇ ರೀತಿ ಮಾ.13ರಂದು ಉಪಗ್ರಹಗಳನ್ನು ಬೇರ್ಪಡಿಸುವಲ್ಲಿಯೂ (ಅನ್‌ಡಾಕಿಂಗ್) ಯಶಕಂಡಿತು 

ADVERTISEMENT

ಜಾಗತಿಕ ಮಟ್ಟದ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೊ ಸಾಧನೆಗಳಿಗೆ 'ಚಿಮ್ಮು ಹಲಗೆ’ ಯಾಗಿರುವ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ, ಪ್ರತಿ ವರ್ಷ ಹಲವು ಉಪಗ್ರಹಗಳ ಉಡಾವಣೆಗೆ ಸಾಕ್ಷಿಯಾಗುತ್ತದೆ. ಆದರೆ, ಈ ವರ್ಷದ ಜನವರಿ 29 ವಿಶೇಷ ದಿನ. ಅಂದು ಈ ಕೇಂದ್ರದಿಂದ 100ನೇ ರಾಕೆಟ್‌ ಉಡಾವಣೆಯಾಯಿತು. ಎನ್‌ವಿಎಸ್-02 ಉಪಗ್ರಹ ಹೊತ್ತ ಜಿಎಸ್ಎಲ್‌ವಿ-ಎಫ್15 ರಾಕೆಟ್ ನಭಕ್ಕೆ ಚಿಮ್ಮಿ ಯಶಸ್ವಿಯಾಗಿ ಕಕ್ಷೆ ಸೇರಿತು

‘ನಿಸಾರ್‌’ ವಿಶೇಷ : ಭೂ ವೀಕ್ಷಣೆ ಉದ್ದೇಶದಿಂದ ಇಸ್ರೊ ಹಾಗೂ ಅಮೆರಿಕದ ನಾಸಾ ಜಂಟಿಯಾಗಿ ಅಭಿವೃದ್ಧಿಪಡಿ ಸಿರುವ ‘ನಿಸಾರ್‌’ (‘ನಾಸಾ–ಇಸ್ರೊ ಸಿಂಥೆಟಿಕ್ ಅಪಾರ್ಚರ್ ರೇಡಾರ್’) ಉಪಗ್ರಹ ಉಡಾವಣೆ ಈ ಬಾರಿಯ ಮತ್ತೊಂದು ವಿಶೇಷ. ಜುಲೈ 30ರಂದು ಈ ಉಪಗ್ರಹ ಹೊತ್ತ ಜಿಎಸ್‌ಎಲ್‌ವಿ–ಎಫ್‌16 ರಾಕೆಟ್‌ ಶ್ರೀಹರಿಕೋಟದಲ್ಲಿರುವ ಸತೀಶ್‌ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿನ ಉಡ್ಡಯನ ನೆಲೆಯಿಂದ ಆಗಸಕ್ಕೆ ಚಿಮ್ಮಿತು. ಭೂ ವೀಕ್ಷಣೆ ಉದ್ದೇಶದಿಂದ ಉಪಗ್ರಹ ನಿರ್ಮಾಣ ಹಾಗೂ ಉಡಾವಣೆಗಾಗಿ ರೂಪಿಸಲಾಗಿರುವ ಬಾಹ್ಯಾಕಾಶ ಕಾರ್ಯಕ್ರಮವೇ ‘ನಿಸಾರ್’

ಪ್ಯಾರಾಚೂಟ್‌ ವ್ಯವಸ್ಥೆ: ಗಗನಯಾನ ಯೋಜನೆಗಳಲ್ಲಿ ಬಳಸಲಾಗುವ ಬಾಹ್ಯಾಕಾಶ ಕೋಶವು ಭೂಮಿಗೆ ಮರಳುವಾಗ ಅದು ಯಶಸ್ವಿಯಾಗಿ ಭೂಸ್ಪರ್ಶಿಸುವಂತೆ ಮಾಡಲು ಪ್ಯಾರಾಚ್ಯೂಟ್‌ ಆಧಾರಿತವಾಗಿ ಇಳಿಯುವ ವ್ಯವಸ್ಥೆಯ ಪರೀಕ್ಷೆಯನ್ನು ಇಸ್ರೊ ಆಗಸ್ಟ್‌ನಲ್ಲಿ ಯಶಸ್ವಿಯಾಗಿ ನಡೆಸಿತು 

ಸಂವಹನ ಉಪಗ್ರಹ–ಬಾಹುಬಲಿ :  ಇಸ್ರೊ, ಹೊಸ ತಲೆಮಾರಿನ, ಸ್ವದೇಶಿ ನಿರ್ಮಿತ ‘ಬಾಹುಬಲಿ’ ರಾಕೆಟ್‌ ಮೂಲಕ ಅತ್ಯಂತ ಭಾರವಾದ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದು ಇಸ್ರೊದ ಈ ವರ್ಷದ ಮತ್ತೊಂದು ಮೈಲಿಗಲ್ಲು. ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ನವೆಂಬರ್ 2ರಂದು 4,410 ಕೆ.ಜಿ ತೂಕದ  ಸಂವಹನ ಉಪಗ್ರಹವನ್ನು (ಸಿಎಂಎಸ್‌–03)  ಹೊತ್ತು ನಭಕ್ಕೆ ಚಿಮ್ಮಿದ ಲಾಂಚ್‌ ವೆಹಿಕಲ್ ಮಾರ್ಕ್–3 (ಎಲ್‌ವಿಎಂ3-ಎಂ5) ‘ಬಾಹುಬಲಿ’ಯು ಆತ್ಮನಿರ್ಭರ ಭಾರತದ ಅಭಿಮಾನದ ಕ್ಷಣಗಳಿಗೆ ಸಾಕ್ಷಿಯಾಯಿತು

ಪ್ರೊಪಲ್ಷನ್ - ಕ್ರಯೋಜೆನಿಕ್ ಅಭಿವೃದ್ಧಿ: ಭಾರತವು 2025ರಲ್ಲಿ ಪ್ರೊಪಲ್ಷನ್ ಮತ್ತು ಕ್ರಯೋಜೆನಿಕ್ ಹಂತದ ಎಂಜಿನ್ ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಿತು. ಜುಲೈ 3ರಂದು ಮಹೇಂದ್ರಗಿರಿಯಲ್ಲಿರುವ ಪ್ರೊಪಲ್ಸನ್ ಕಾಂಪ್ಲೆಕ್ಸ್‌ನಲ್ಲಿ ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮ 'ಗಗನಯಾನ'ದ 'ಸರ್ವಿಸ್ ಮಾಡ್ಯೂಲ್ ಪ್ರೊಪಲ್ಸನ್ ಸಿಸ್ಟಮ್'ನ (ಎಸ್‌ಎಂಪಿಎಸ್) ಮತ್ತೆ ಎರಡು ‘ಹಾಟ್ ಟೆಸ್ಟ್‌’ಗಳನ್ನು ಯಶಸ್ವಿಯಾಗಿ ನಡೆಸಲಾಯಿತು

ಸಂಭ್ರಮದ ವರ್ಷಾಂತ್ಯ: ವರ್ಷಾಂತ್ಯವೂ ಇಸ್ರೊ ಪಾಲಿಗೆ ಸಾಧನೆ ಸಂಭ್ರಮ. ಡಿಸೆಂಬರ್ 24ರಂದು ಸ್ವದೇಶಿ ನಿರ್ಮಿತ 'ಬಾಹುಬಲಿ' ರಾಕೆಟ್ ಮೂಲಕ ಹೊಸ ತಲೆಮಾರಿನ ಅಮೆರಿಕದ ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ನಿಗದಿತ ಕಕ್ಷೆಗೆ ಸೇರಿಸಿತು. 6,100 ಕೆ.ಜಿ ತೂಕದ ಬ್ಲೂಬರ್ಡ್ ಬ್ಲಾಕ್ -2 ಸಂವಹನ ಉಪಗ್ರಹವನ್ನು ಹೊತ್ತ ಎಲ್‌ವಿಎಂ3-ಎಂ6 ರಾಕೆಟ್, ನಭಕ್ಕೆ ಚಿಮ್ಮಿತು. ಭಾರತದ ಮಣ್ಣಿನಿಂದ ಉಡಾವಣೆಯಾದ ಅತ್ಯಂತ ಭಾರವಾದ ಉಪಗ್ರಹ ಇದು.

ಐಎಸ್‌ಎಸ್‌ನಲ್ಲಿ ಮೊದಲ ಭಾರತೀಯ

‘ಆಕ್ಸಿಯಂ-4’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಜೂನ್ 25ರಂದು, ಭಾರತದ ಗಗನಯಾನಿ ಶುಭಾಂಶು ಶುಕ್ಲಾ, ಹಂಗರಿ, ಪೋಲೆಂಡ್‌ನ ಗಗನಯಾತ್ರಿಗಳೊಂದಿಗೆ  ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ (ಐಎಸ್ಎಸ್) ಯಶಸ್ವಿಯಾಗಿ ಪ್ರಯಾಣ ಬೆಳೆಸಿದರು. 18 ದಿನಗಳ ಈ ‘ಗಗನ ಯಾತ್ರೆ’ಯಲ್ಲಿ ಸಹ ವಿಜ್ಞಾನಿಗಳ ಜೊತೆಗೆಗೂಡಿ ಐಎಸ್‌ಎಸ್‌ನಲ್ಲಿ 60ಕ್ಕೂ ಹೆಚ್ಚು ಪ್ರಯೋಗಗಳನ್ನು ನಡೆಸಿದರು.

ರಕ್ಷಣೆ : ಯಶಸ್ವಿ ಪ್ರಯೋಗಗಳ ಸಾಲು

ಶತ್ರುಗಳ ಅತ್ಯಾಧುನಿಕ ‘ಶಸ್ತ್ರಾಸ್ತ್ರ’ಗಳನ್ನು ಹೊಡೆದುರುಳಿಸುವ ಸ್ವದೇಶಿ ನಿರ್ಮಿತ ಆಕಾಶ್‌ ವಾಯು ರಕ್ಷಣಾ  ಕ್ಷಿಪಣಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿದ್ದು, ಕಡಿಮೆ ಎತ್ತರದಲ್ಲಿರುವ ಗುರಿಯನ್ನು ಧ್ವಂಸ ಮಾಡುವ  ವಿಎಸ್‌ಎಚ್‌ಒಆರ್‌ಎಡಿಎಸ್‌, ಲೇಸರ್‌ ಕಿರಣಗಳ ಮೂಲಕ ಶತ್ರುಗಳ ವಿಮಾನ, ಡ್ರೋನ್‌, ಕ್ಷಿಪಣಿಗಳನ್ನು ನಿರ್ನಾಮ ಮಾಡುವ  ಡಿಇಡಬ್ಲ್ಯು... ಇವು 2025ರ ಭಾರತೀಯ ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚು ಸದ್ದು ಮಾಡಿದ ರಕ್ಷಣಾ ಸಾಧನೆಗಳು 

* ಈ ವರ್ಷದ ಫೆಬ್ರುವರಿ 1ರಂದು ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಅತ್ಯಂತ ಕಡಿಮೆ ಎತ್ತರದಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯ (ವಿಎಸ್‌ಎಚ್‌ಒಆರ್‌ ಎಡಿಎಸ್‌) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಇದರ ಮೂಲಕ  600 ಮೀಟರ್‌ನಿಂದ 6 ಕಿ.ಮೀ ದೂರದಲ್ಲಿರುವ ಗುರಿಯನ್ನು ನಾಶಪಡಿಸಬಹುದು

* ಲೇಸರ್‌ ಕಿರಣಗಳ ಮೂಲಕ ಶತ್ರುಗಳ ವಿಮಾನ, ಡ್ರೋನ್‌, ಕ್ಷಿಪಣಿಯನ್ನು ನಾಶ ಮಾಡುವ ಅಸ್ತ್ರ ಲೇಸರ್‌ ಬೇಸ್ಡ್‌ ಡೈರೆಕ್ಟೆಡ್‌ ಎನರ್ಜಿ ವೆಪನ್‌(Laser Based Directed Energy Wepon- ಡಿಇಡಬ್ಲ್ಯು). ಡಿಆರ್‌ಡಿಒ ಏಪ್ರಿಲ್ 13ರಂದು ಈ ಸಾಧನದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಗರಿಷ್ಠ 3.5 ಕಿ.ಮೀ ದೂರ ದಲ್ಲಿರುವ ಗುರಿಗಳನ್ನು ಧ್ವಂಸ ಮಾಡಬಲ್ಲ ಸಾಮರ್ಥ್ಯ ಇದರದ್ದು

* ಜುಲೈ 28, 29ರಂದು ಒಡಿಶಾದ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ  ‘ಪ್ರಳಯ’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆಸಲಾಯಿತು

* ಡ್ರೋನ್‌ ದಾಳಿ ಮೂಲಕ ನಡೆಸಬಹುದಾದ ನಿಖರ ನಿರ್ದೇಶಿತ ಕ್ಷಿಪಣಿ (ಯುಎಲ್‌ಪಿಜಿಎಂ–ವಿ3) ಪ್ರಯೋಗ ಜುಲೈ 25ರಂದು ಯಶಸ್ವಿಯಾಗಿ ನೆರವೇರಿತು

* ಡಿಆರ್‌ಡಿಒ ವಿನ್ಯಾಸಗೊಳಿಸಿದ ದೇಶೀಯ ತಂತ್ರಜ್ಞಾನದಲ್ಲಿ ವಿನ್ಯಾಸಗೊಳಿಸಿದ ‘ಎಂಕೆ–II’ ಯಂತ್ರವನ್ನು ಆಗಸ್ಟ್‌ 11ರಂದು ಸೇನೆಗೆ ಸೇರ್ಪಡೆಗೊಳಿಸಲಾಯಿತು. ಸ್ಫೋಟಕ ಅಡಗಿಸಿಟ್ಟ ಪ್ರದೇಶಗಳ ಯಾಂತ್ರಿಕ ಗುರುತು ಮಾಡುವ ಈ ಸಾಧನ ಸೇನಾ ಕಾರ್ಯಾಚರಣೆಗಳ ಕಾರ್ಯಕ್ಷಮತೆ ಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

* ಯುದ್ಧ ವಿಮಾನ ಚಾಲನೆಯಲ್ಲಿರುವಾಗ ಆಮ್ಲಜನಕ ಉತ್ಪತ್ತಿ ಮಾಡಿ, ಪೈಲಟ್‌ಗಳಿಗೆ ಪೂರೈಸುವ ಸಾಧನವೊಂದನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿತು. ಭೂಮಟ್ಟದಿಂದ ಅತಿ ಅತ್ತರದಲ್ಲಿ ಹಾರಾಡುವ ತೇಜಸ್‌ನಂತಹ ಲಘು ಯುದ್ಧ ವಿಮಾನದ ಪೈಲಟ್‌ಗಳಿಗೆ ಜೀವ ರಕ್ಷಕ ಆಮ್ಲಜನಕ ವ್ಯವಸ್ಥೆಯನ್ನು ಪೂರೈಸುವ ಸಾಧನ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.