
ಹೈದರಾಬಾದ್: ಮುಂದಿನ ಮೂರು ವರ್ಷಗಳಲ್ಲಿ ಭಾರತವು ಬಾಹ್ಯಾಕಾಶದಲ್ಲಿ ಈಗಿರುವ ತನ್ನ 55 ಉಪಗ್ರಹಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಬೇಕಿದೆ ಎಂದು ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ಶುಕ್ರವಾರ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಕಕ್ಷೆಯಲ್ಲಿ 55 ಉಪಗ್ರಹಗಳು ಈ ದೇಶದ ಸಾಮಾನ್ಯ ಜನರಿಗೆ ಸೇವೆ ಒದಗಿಸುತ್ತಿವೆ. ಮುಂದಿನ ಮೂರು ವರ್ಷಗಳಲ್ಲಿ ಈ ಸಂಖ್ಯೆ ಮೂರುಪಟ್ಟಾಗಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದರು.
‘ಈಗ ನಾವು ನಮ್ಮದೇ ಬ್ಯಾಹ್ಯಾಕಾಶ ನಿಲ್ದಾಣ ಹೊಂದುವ ನಿಟ್ಟಿನಲ್ಲಿ ನಿರತರಾಗಿದ್ದೇವೆ. 2035ರ ವೇಳೆಗೆ ಇದು ಸಾಕಾರಗೊಳ್ಳಲಿದೆ’ ಎಂದು ಹೇಳಿದರು.
‘2040ರ ವೇಳೆಗೆ ಭಾರತವು ಬಾಹ್ಯಾಕಾಶ ತಂತ್ರಜ್ಞಾನ, ಆನ್ವಯಿಕ ಕ್ಷೇತ್ರಗಳು ಮತ್ತು ಮೂಲಸೌಕರ್ಯದಲ್ಲಿ ಇತರ ರಾಷ್ಟ್ರಗಳಿಗೆ ಸರಿಸಮವಾಗಿರಲಿದೆ. ಈ ವರ್ಷ ಇಸ್ರೊ 12 ಅಂತರಿಕ್ಷ ಯಾನಗಳನ್ನು ಕೈಗೊಳ್ಳಲಿದೆ’ ಎಂದು ಹೇಳಿದ್ದಾರೆ.
‘ನಾಸಾ–ಇಸ್ರೊ ಸಿಂಥೆಟಿಕ್ ಅಪರ್ಚರ್ ರಾಡಾರ್ (ನಿಸಾರ್) ಅನ್ನು ಭಾರತದ ಜಿಎಸ್‌ಎಲ್‌ವಿ ಎಫ್–16 ಮೂಲಕ ಜುಲೈ 30ರಂದು ಉಡಾವಣೆ ಮಾಡುವುದು ಮುಂದಿನ ಕಾರ್ಯಾಚರಣೆಯಾಗಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.