
ಪಿಎಸ್ಎಲ್ವಿ–ಸಿ62 ರಾಕೆಟ್ 16 ಉಪಗ್ರಹಗಳನ್ನು ಹೊತ್ತು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಬೆಳಿಗ್ಗೆ ನಭಕ್ಕೆ ಚಿಮ್ಮಿತ್ತು
ಪಿಟಿಐ ಚಿತ್ರ
ಶ್ರೀಹರಿಕೋಟ: ವಿದೇಶದ ಭೂ ಸರ್ವೇಕ್ಷಣಾ ಉಪಗ್ರಹ ಸೇರಿದಂತೆ 16 ಉಪಗ್ರಹಗಳನ್ನು ಹೊತ್ತು ನಭಕ್ಕೆ ಚಿಮ್ಮಿದ್ದ ಪಿಎಸ್ಎಲ್ವಿ–ಸಿ62 ರಾಕೆಟ್‌ನಲ್ಲಿ ತಾಂತ್ರಿಕ ದೋಷವುಂಟಾಗಿ ಯೋಜನೆಯು ವಿಫಲವಾಗಿದೆ ಎಂದು ಇಸ್ರೊ ಸೋಮವಾರ ತಿಳಿಸಿದೆ.
‘ನಿಗದಿತ ಕಕ್ಷೆಗೆ ಉಪಗ್ರಹಗಳನ್ನು ಸೇರಿಸುವ ಉದ್ದೇಶದ ಯೋಜನೆಯು ವಿಫಲವಾಗಿದೆ. ಎಲ್ಲಾ 16 ಉಪಗ್ರಹಗಳು ಸಂಪರ್ಕ ಕಳೆದುಕೊಂಡಿವೆ’ ಎಂದು ಅದು ಮಾಹಿತಿ ನೀಡಿದೆ.
ಇದರೊಂದಿಗೆ ಇಸ್ರೊದ ವರ್ಷದ ಮೊದಲ ಉಪಗ್ರಹ ಉಡಾವಣೆ ಯೋಜನೆ ವಿಫಲವಾದಂತಾಗಿದೆ.
‘ಪೂರ್ವನಿಗದಿಯಂತೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಬೆಳಿಗ್ಗೆ 10.18ಕ್ಕೆ ರಾಕೆಟ್ ಉಡಾವಣೆ ಮಾಡಲಾಗಿತ್ತು. ಉಪಗ್ರಹಗಳನ್ನು ಭೂಮಿಯಿಂದ 512 ಕಿ.ಮೀ. ದೂರದ ‘ಸೂರ್ಯ ಸಮನ್ವಯ ಕಕ್ಷೆ’ಗೆ ಸೇರಿಸುವ ಉದ್ದೇಶದ ಮಹತ್ವದ ಯೋಜನೆ ಇದಾಗಿತ್ತು. ಒಟ್ಟು 4 ಹಂತಗಳಲ್ಲಿ ಯೋಜನೆಯನ್ನು ರೂಪಿಸಲಾಗಿತ್ತು. ಕೊನೆಯ ಹಂತದಲ್ಲಿ ಕಾರ್ಯಾಚರಣೆ ವಿಫಲವಾಯಿತು’ ಎಂದು ಇಸ್ರೊ ತಿಳಿಸಿದೆ.
‘ಯೋಜನಾ ನಿರ್ದೇಶಕರ ಅನುಮತಿಯ ಬಳಿಕ ಸ್ವಯಂಚಾಲಿತವಾಗಿ ಉಪಗ್ರಹವು ಉಡಾವಣೆಗೊಂಡಿತು. ಇಸ್ರೊ ವಿಜ್ಞಾನಿಗಳು ಉಡಾವಣಾ ವಾಹಕದ ಕ್ಷಣ ಕ್ಷಣದ ಮಾಹಿತಿ ನೀಡುತ್ತಿದ್ದರು. ಆರಂಭಿಕ ಹಂತವು ನಿರೀಕ್ಷೆಯಂತೆಯೇ ಸಾಗಿತ್ತು. ಆದರೆ ಮೂರನೇ ಹಂತದ ಕೊನೆಯಲ್ಲಿ ದೋಷ ಕಾಣಿಸಿಕೊಂಡಿತು. ಬಳಿಕ ರಾಕೆಟ್ ಪಥ ಬದಲಿಸಿತು. ತಾಂತ್ರಿಕ ದೋಷದ ಕಾರಣ ಪತ್ತೆಗಾಗಿ ಲಭ್ಯವಿರುವ ದತ್ತಾಂಶವನ್ನು ವಿಶ್ಲೇಷಿಸಲಾಗುತ್ತಿದೆ’ ಎಂದು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ತಿಳಿಸಿದರು.
ಪಿಎಸ್‌ಎಲ್‌ವಿ–ಸಿ62 ರಾಕೆಟ್ 16 ಉಪಗ್ರಹಗಳನ್ನು ಹೊತ್ತು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಬೆಳಿಗ್ಗೆ ನಭಕ್ಕೆ ಚಿಮ್ಮಿತ್ತು
ಐದನೇ ಬಾರಿ ವೈಫಲ್ಯ ಕಂಡ ಪಿಎಸ್‌ಎಲ್‌ವಿ
ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ಅತ್ಯಂತ ವಿಶ್ವಾಸಾರ್ಹ ರಾಕೆಟ್ ಎಂದೇ ಪಿಎಸ್‌ಎಲ್‌ವಿ (ಧ್ರುವೀಯ ಉಪಗ್ರಹ ಉಡ್ಡಯನ ವಾಹನ) ಹೆಸರುವಾಸಿಯಾಗಿದೆ. ಈ ಮಾದರಿಯ ರಾಕೆಟ್‌ಗಳನ್ನು ಚಂದ್ರಯಾನ–1 ಮಂಗಳಯಾನ ಆದಿತ್ಯ ಎಲ್–1 ಸೇರಿದಂತೆ 64 ಬಾರಿ ಉಡ್ಡಯನಕ್ಕೆ ಇಸ್ರೊ ಬಳಕೆ ಮಾಡಿದೆ. ಇದು ಈವರೆಗೆ ಐದು ಬಾರಿ ವೈಫಲ್ಯ ಕಂಡಿದೆ. ಕಳೆದ ವರ್ಷ ಮೇ 25ರಂದು ನಭಕ್ಕೆ ಚಿಮ್ಮಿದ್ದ ಪಿಎಸ್ಎಲ್ವಿ–ಸಿ61 ರಾಕೆಟ್ ಕೂಡ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸುವಲ್ಲಿ ವಿಫಲವಾಗಿತ್ತು.
ರಾಕೆಟ್‌ನಲ್ಲಿ ಇದ್ದಿದ್ದು ಏನೇನು?
ಪಿಎಸ್‌ಎಸ್‌ವಿ ರಾಕೆಟ್‌ನಲ್ಲಿ ಥಾಯ್ಲೆಂಡ್ ಮತ್ತು ಬ್ರಿಟನ್ ಅಭಿವೃದ್ಧಿಪಡಿಸಿದ ಭೂ ಸರ್ವೇಕ್ಷಣಾ ಉಪಗ್ರಹ ಕೆಐಡಿ ಕ್ಯಾಪ್ಸ್ಯೂಲ್ ಸೆಪರೇಷನ್ ಧ್ರುವ ಸ್ಪೇಸ್‌ನ ಐದು ಉಪಗ್ರಹಗಳು ಬ್ರೆಜಿಲ್‌ನ ಐದು ಹಾಗೂ ಬ್ರಿಟನ್ ಅಂತರಿಕ್ಷ ಪ್ರತಿಷ್ಠಾನ (ನೇಪಾಳ ಮತ್ತು ಭಾರತ) ಲಕ್ಷ್ಮಣ ಜ್ಞಾನಪೀಠ ಮತ್ತು ಆರ್ಬಿಟ್‌ಏಡ್ (ಭಾರತ) ಹಾಗೂ ಆರ್ಬಿಟಲ್ ಪ್ಯಾರಾಡಿಯಮ್‌ನ (ಸ್ಪೇನ್ ಫ್ರಾನ್ಸ್) ತಲಾ ಒಂದೊಂದು ಉಪಗ್ರಹಗಳು ಇದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.