ADVERTISEMENT

ಬ್ರಿಟನ್‌ನ 36 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಇಸ್ರೊ ರಾಕೆಟ್‌

ಪಿಟಿಐ
Published 26 ಮಾರ್ಚ್ 2023, 14:11 IST
Last Updated 26 ಮಾರ್ಚ್ 2023, 14:11 IST
....
....   

ಶ್ರೀಹರಿಕೋಟಾ (ಪಿಟಿಐ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಬೃಹತ್‌ ಎಲ್‌ವಿಎಂ3–ಎಂ3 ರಾಕೆಟ್‌ ಬ್ರಿಟನ್‌ ಮೂಲದ ಒನ್‌ವೆಬ್‌ ಗ್ರೂಪ್‌ ಸಂಸ್ಥೆಯ 36 ಉಪಗ್ರಹಗಳನ್ನು ಭಾನುವಾರ ಯಶಸ್ವಿಯಾಗಿ ಕಕ್ಷೆಗೆ ತಲುಪಿಸಿತು.

ಎಲ್‌ವಿಎಂ3–ಎಂ3/ಒನೆವೆಬ್‌ ಇಂಡಿಯ–2 ಎಂದು ಈ ಯೋಜನೆಯನ್ನು ಕರೆಯಲಾಗಿದೆ. ಉಪಗ್ರಹಗಳನ್ನು ಹೊತ್ತ ರಾಕೆಟ್‌ ಇಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 9 ಗಂಟೆಗೆ ಉಡಾವಣೆಗೊಂಡಿತು. ಸಿಬ್ಬಂದಿ ಸಹಿತ ‘ಗಗನಯಾನ’ ಯೋಜನೆಗೆ ಬಳಸಿರುವ ತಾಂತ್ರಿಕ ಸಂಯೋಜನೆಯನ್ನೇ ಈ ರಾಕೆಟ್‌ನಲ್ಲಿಯೂ ಬಳಸಲಾಗಿದೆ. ಈ ರಾಕೆಟ್‌ ಅತ್ಯುತ್ತಮ ರೀತಿಯಲ್ಲಿ ಕಾರ್ಯಾಚರಣೆ ಮಾಡಿದೆ ಎಂದು ಇಸ್ರೊ ಮುಖ್ಯಸ್ಥ ಎಸ್‌. ಸೋಮನಾಥ್‌ ಅವರು ತಿಳಿಸಿದ್ದಾರೆ.

ರಾಕೆಟ್‌ ಉಡಾವಣೆ ಆದ 20 ನಿಮಿಷಗಳಲ್ಲಿ ಒಟ್ಟು 16 ಉಪಗ್ರಹಗಳನ್ನು ನಿಗದಿತ ಕಕ್ಷೆಗಳಿಗೆ ಸೇರಿಸಲಾಯಿತು. ಬಳಿಕ ಬಾಕಿ ಉಪಗ್ರಹಗಳನ್ನು ಕಕ್ಷೆಗಳಿಗೆ ಸೇರಿಸಲಾಯಿತು. ಒಟ್ಟು 5,805 ಕೆ.ಜಿ. ತೂಕವಿದ್ದ ಉಪಗ್ರಹಗಳನ್ನು ಸುಮಾರು 9 ನಿಮಿಷದಲ್ಲಿ 450 ಕಿ.ಮೀ. ಎತ್ತರಕ್ಕೆ ಈ ರಾಕೆಟ್‌ ಹೊತ್ತೊಯ್ದಿದೆ ಎಂದು ಇಸ್ರೊ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಇಸ್ರೊದ ವಾಣಿಜ್ಯ ಉದ್ದೇಶದ ಘಟಕ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್‌ಐಲ್‌) ಎರಡನೇ ಯೋಜನೆ ಇದಾಗಿದೆ. ಬ್ರಿಟನ್‌ನ ಒನ್‌ವೆಬ್‌ ಗ್ರೂಪ್‌ ಕಂಪನಿಗೆ ಒಳಪಟ್ಟ ನೆಟ್‌ವರ್ಕ್‌ ಆ್ಯಕ್ಸೆಸ್‌ ಅಸೋಸಿಯೇಟ್ಸ್‌ ಲಿಮಿಟೆಡ್‌ ಜೊತೆ 72 ಉಪಗ್ರಹಗಳನ್ನು ಉಡಾವಣೆ ಮಾಡುವ ನಿಟ್ಟಿನಲ್ಲಿ ಇಸ್ರೊ ಒಪ್ಪಂದ ಮಾಡಿಕೊಂಡಿತ್ತು. ಮೊದಲ ಗುಂಪಿನ 36 ಉಪಗ್ರಹಗಳನ್ನು 2022ರ ಅಕ್ಟೋಬರ್‌ 23ರಂದು ಇಸ್ರೊ ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಎರಡನೇ ಗುಂಪಿನ ಉಪಗ್ರಹಗಳ ಉಡಾವಣೆಯನ್ನು ಭಾನುವಾರ ಮಾಡಲಾಗಿದೆ.

ಎಲ್ಲಾ 36 ಉಪಗ್ರಹಗಳು ನಿಗದಿತ ಕಕ್ಷೆಗೆ ತಲುಪಿವೆ ಎಂದು ಒನ್‌ವೆಬ್‌ ಮಾಹಿತಿ ನೀಡಿದೆ ಎಂದು ಇಸ್ರೊ ತಿಳಿಸಿದೆ.

ಇದು ಎಲ್‌ವಿಎಂ3 ಆವೃತಿಯ ಆರನೇ ಯಶಸ್ವೀ ಉಡಾವಣೆ. ಇದಕ್ಕೂ ಮೊದಲು ಎಲ್‌ವಿಎಂ3ನ್ನು ಜಿಯೋಸಿಂಕ್ರೋನಸ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ ಎಂಕೆ 3 (ಜಿಎಸ್‌ಎಲ್‌ವಿ 3) ಎಂದು ಕರೆಯಲಾಗುತ್ತಿತ್ತು.

ಒನ್‌ವೆಬ್‌ ಕಂಪನಿ ಈಗಾಗಲೇ 616 ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಿದ್ದು, ಈ ವರ್ಷದ ಅಂತ್ಯದ ವೇಳೆಗೆ ಜಾಗತಿಕ ಮಟ್ಟದಲ್ಲಿ ಇಂಟರ್‌ನೆಟ್‌ ಸೇವೆ ಒದಗಿಸಲಿದೆ. ಭಾರತದಲ್ಲಿ ಸಹ ಈ ಕಂಪನಿಯ ಇಂಟರ್‌ನೆಟ್‌ ಸೇವೆ ಲಭಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.