
ನವದೆಹಲಿ: ಮುಂದಿನ ವರ್ಷದ ಮಾರ್ಚ್ ವೇಳೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಏಳು ಉಡಾವಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲಿದೆ. ಇದರಲ್ಲಿ ಉಪಗ್ರಹ ಮತ್ತು ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ ತಂತ್ರಜ್ಞಾನಗಳಿಗಾಗಿ ಸ್ವದೇಶಿ ನಿರ್ಮಿತ ವಿದ್ಯುತ್ ಪ್ರೊಪಲ್ಷನ್ ವ್ಯವಸ್ಥೆಗಳನ್ನು ಪ್ರದರ್ಶಿಸುವುದು ಹಾಗೂ ಗಗನಯಾನ ಯೋಜನೆಯ ಮೊದಲ ಮಾನವರಹಿತ ಕಾರ್ಯಾಚರಣೆಯೂ ಸೇರಿವೆ.
ಏಳು ಕಾರ್ಯಾಚರಣೆಗಳ ಪೈಕಿ ಮೊದಲನೆಯ ಉಡಾವಣೆ ಮುಂದಿನ ವಾರ ನಡೆಯುವ ನಿರೀಕ್ಷೆಯಿದೆ.
‘ಇಸ್ರೊದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಹಾಗೂ ಅಮೆರಿಕದ ಎಎಸ್‌ಟಿ ಸ್ಪೇಸ್ ಮೊಬೈಲ್ ನಡುವಿನ ವಾಣಿಜ್ಯ ಒಪ್ಪಂದದಂತೆ ‘ಬ್ಲೂಬರ್ಡ್–6’ ಸಂವಹನ ಉಪಗ್ರಹವನ್ನು ಭಾರತದ ‘ಬಾಹುಬಲಿ’ ರಾಕೆಟ್ ಎಲ್‌ವಿಎಂ–3 ಮೂಲಕ ಕಕ್ಷೆಗೆ ಸೇರಿಸಲಿದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇತ್ತೀಚೆಗೆ ಸಂಸತ್‌ಗೆ ತಿಳಿಸಿದ್ದರು.
‘ಮಾನವಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ಮಾನವರಹಿತ ಕಾರ್ಯಾಚರಣೆಗೆ ವಿನ್ಯಾಸಗೊಳಿಸಲಾಗಿರುವ ‘ವ್ಯೋಮಮಿತ್ರ’ ರೋಬೊಟ್ ಅನ್ನು ಮುಂದಿನ ವರ್ಷದ ಆರಂಭದಲ್ಲಿ ಎಲ್‌ವಿಎಂ–3 ರಾಕೆಟ್ ಮೂಲಕ ಉಡ್ಡಯನ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಕಾರ್ಯಗಳು ಭರದಿಂದ ಸಾಗಿವೆ’ ಎಂದು ತಿಳಿಸಿದ್ದಾರೆ.
‘2027ರಲ್ಲಿ ಇಸ್ರೊ ಭಾರತೀಯ ಗಗನಯಾತ್ರಿಗಳನ್ನು ಭೂಮಿಯ ಕೆಳ ಕಕ್ಷೆಗೆ ಕಳುಹಿಸುವ ಮೊದಲು, ಮುಂದಿನ ವರ್ಷದ ಕೊನೆಯಲ್ಲಿ ಮತ್ತೊಂದು ಮಾನವರಹಿತ ಕಾರ್ಯಾಚರಣೆ ಕೈಗೊಳ್ಳಲು ಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಮುಂದಿನ ವರ್ಷ ಎಚ್‌ಎಎಲ್ ಹಾಗೂ ಎಲ್ ಆ್ಯಂಡ್ ಟಿ ಕಂಪನಿಗಳ ಒಕ್ಕೂಟವು ನಿರ್ಮಿಸಿದ ಮೊದಲ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಉಡ್ಡಯನವಾಗಲಿದ್ದು, ಇದು ಓಷನ್‌ಸ್ಯಾಟ್ ಉಪಗ್ರಹವನ್ನು ಕಕ್ಷೆಗೆ ಸೇರಿಸಲಿದೆ. ಪಿಎಸ್‌ಎಲ್‌ವಿ ಇನ್ನೂ ಎರಡು ಉಪಗ್ರಹಗಳಾದ ಭಾರತ ಮತ್ತು ಮಾರಿಷಸ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಉಪಗ್ರಹ ಹಾಗೂ ಭಾರತದ ಖಾಸಗಿ ಬಾಹ್ಯಾಕಾಶ ಕಂಪನಿ ‘ಧ್ರುವ ಸ್ಪೇಸ್’ನ ಎಲ್‌ಇಎಪಿ–2 ಉಪಗ್ರಹವನ್ನು ಹೊತ್ತೊಯ್ಯಲಿದೆ.
ಐದು ಪಿಎಸ್‌ಎಲ್‌ವಿ ರಾಕೆಟ್‌ಗಳನ್ನು ತಯಾರಿಸಲು ಎಚ್‌ಎಎಲ್ ಹಾಗೂ ಎಲ್ ಆ್ಯಂಡ್ ಟಿ ಒಕ್ಕೂಟದೊಂದಿಗೆ ಎನ್‌ಎಸ್‌ಐಎಲ್ ಒಪ್ಪಂದ ಮಾಡಿಕೊಂಡಿತ್ತು.
ಇಸ್ರೊ ನಿರ್ಮಿತ ಪಿಎಸ್‌ಎಲ್‌ವಿ, ಭೂ ವೀಕ್ಷಣಾ ಉಪಗ್ರಹ (ಇಒಎಸ್–ಎನ್1), ಭಾರತ ಮತ್ತು ವಿದೇಶಗಳ 18 ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗುತ್ತದೆ.
ಜಿಎಸ್‌ಎಲ್‌ವಿ–ಎಂಕೆ II ರಾಕೆಟ್ ಇಒಎಸ್ 5 ಉಪಗ್ರಹ ಅಥವಾ ಜಿಐಎಸ್‌ಎಟಿ–1ಎ ಅನ್ನು ಉಡಾಯಿಸುವ ನಿರೀಕ್ಷೆಯಿದೆ. ಇದು 2021ರಲ್ಲಿ ಉದ್ದೇಶಿತ ಕಕ್ಷೆಯನ್ನು ತಲುಪಲು ವಿಫಲವಾದ ಜಿಐಎಸ್‌ಎಟಿ–1ಗೆ ಬದಲಿಯಾಗಿದೆ.
ಇಸ್ರೊದ ಪಿಎಸ್‌ಎಲ್‌ವಿ63 ಮಿಷನ್ ಟಿಡಿಎಸ್–1 ಉಪಗ್ರಹವನ್ನು ಕಕ್ಷೆಗೆ ಸೇರಿಸಲಿದ್ದು, ಇದು ಹೈ ಥ್ರಸ್ಟ್ ಎಲೆಕ್ಟ್ರಿಕ್ ಪ್ರೊಪಲ್ಷನ್ ಸಿಸ್ಟಮ್, ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ ಮತ್ತು ತರಂಗ ಟ್ಯೂಬ್ ಆಂಪ್ಲಿಫಯರ್‌ನಂತಹ ತಂತ್ರಜ್ಞಾನಗಳನ್ನು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.