
ಶ್ರೀಹರಿಕೋಟಾ: ಸ್ವದೇಶಿ ನಿರ್ಮಿತ ‘ಬಾಹುಬಲಿ’ ರಾಕೆಟ್ ಮೂಲಕ ಹೊಸ ತಲೆಮಾರಿನ ಅಮೆರಿಕದ ಸಂವಹನ ಉಪಗ್ರಹವನ್ನು ಇಸ್ರೊ ಯಶಸ್ವಿಯಾಗಿ ನಿಗದಿತ ಕಕ್ಷೆಗೆ ಬುಧವಾರ ಸೇರಿಸಿತು. ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
6,100 ಕೆ.ಜಿ ತೂಕದ ಬ್ಲೂಬರ್ಡ್ ಬ್ಲಾಕ್ –2 ಸಂವಹನ ಉಪಗ್ರಹವನ್ನು ಹೊತ್ತ ಎಲ್‌ವಿಎಂ3–ಎಂ6 ರಾಕೆಟ್, ಆಂಧ್ರ ಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಉಡ್ಡಯನ ಕೇಂದ್ರದ ಎರಡನೇ ಲಾಂಚ್‌ಪ್ಯಾಡ್‌ನಿಂದ ಬೆಳಿಗ್ಗೆ 8.55ಕ್ಕೆ ಸರಿಯಾಗಿ ನಭಕ್ಕೆ ಚಿಮ್ಮಿತು. ಭಾರತದ ಮಣ್ಣಿನಿಂದ ಉಡಾವಣೆಯಾದ ಅತ್ಯಂತ ಭಾರವಾದ ಉಪಗ್ರಹ ಇದಾಗಿದೆ ಎಂದು ಇಸ್ರೊ ತಿಳಿಸಿದೆ.
ಅತ್ಯಂತ ಭಾರವಾದ ಪೇಲೋಡ್‌ಗಳನ್ನು ಹೊತ್ತೊಯ್ಯುತ್ತಿರುವ ಕಾರಣ ಎಲ್‌ವಿಎಂ3–ಎಂ6 ರಾಕೆಟ್‌ಗೆ ‘ಬಾಹುಬಲಿ’ ಎಂದೇ ಕರೆಯಲಾಗುತ್ತಿದೆ ಎಂದು ಅದು ತಿಳಿಸಿದೆ.
ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಮತ್ತು ಅಮೆರಿಕ ಮೂಲದ ಎಎಸ್‌ಟಿ ಸ್ಪೇಸ್‌ಮೊಬೈಲ್ ನಡುವೆ ನಡೆದ ಖಾಸಗಿ ಒಪ್ಪಂದದ ಭಾಗವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್, ಇಸ್ರೊ ಅಡಿಯಲ್ಲಿ ಕಾರ್ಯನಿರ್ವಹಿಸುವ ವಾಣಿಜ್ಯ ಸಂಸ್ಥೆಯಾಗಿದೆ.
ಬಾಹ್ಯಾಕಾಶ ನೌಕೆಯು ಉಡಾವಣೆಯಾದ 15 ನಿಮಿಷಗಳ ಬಳಿಕ ಉಡಾವಣಾ ವಾಹಕದಿಂದ ಪ್ರತ್ಯೇಕಗೊಂಡಿತು. ಬಳಿಕ ಯಶಸ್ವಿಯಾಗಿ ಉಪಗ್ರಹವನ್ನು ಕಕ್ಷೆಗೆ ಸೇರಿಸಿತು ಎಂದು ಇಸ್ರೊ ಹೇಳಿದೆ.
ಬಳಿಕ ಮಾತನಾಡಿದ ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಅವರು, ‘ಉಪಗ್ರಹವನ್ನು ಬಾಹುಬಲಿ ರಾಕೆಟ್ ಯಶಸ್ವಿಯಾಗಿ ನಿಗದಿತ ಕಕ್ಷೆಗೆ ಸೇರಿಸಿದೆ. ನ್ಯೂಸ್ಪೇಸ್ ಇಂಡಿಯಾ ಮತ್ತು ಎಎಸ್‌ಟಿ ಸ್ಪೇಸ್ ಮೊಬೈಲ್‌ಗೆ ಅಭಿನಂದನೆಗಳು’ ಎಂದು ತಿಳಿಸಿದರು.
ಇದರೊಂದಿಗೆ ಇಸ್ರೊ 52 ದಿನಗಳ ಒಳಗಾಗಿ ಎರಡು ಎಲ್‌ವಿಎಂ3 ರಾಕೆಟ್‌ಗಳನ್ನು ಉಡಾವಣೆ ಮಾಡಿದಂತಾಗಿದೆ. ಇದಕ್ಕೂ ಮುನ್ನ ನವೆಂಬರ್ 2ರಂದು 4,400 ಕೆ.ಜಿ ತೂಕದ ಉಪಗ್ರಹವನ್ನು ಆಗಸಕ್ಕೆ ಕೊಂಡೊಯ್ದಿತ್ತು ಎಂದು ಹೇಳಿದರು.
‘ಪರಿಶ್ರಮಕ್ಕೆ ಪ್ರತಿಫಲ ಎಂದರೆ ಮತ್ತಷ್ಟು ಕೆಲಸ. ನಮ್ಮ ಕೈಯಲ್ಲಿ ಹಲವು ಮಹತ್ವದ ಯೋಜನೆಗಳಿವೆ’ ಎಂದು ಅವರು ಹೇಳಿದರು.
Highlights - 6,100 ಕೆ.ಜಿ– ಬ್ಲೂಬರ್ಡ್ ಬ್ಲಾಕ್–2ನ ತೂಕ 43.5 ಮೀಟರ್–ಎಲ್‌ವಿಎಂ3 ರಾಕೆಟ್‌ನ ಎತ್ತರ *ರಾಕೆಟ್ ವಿನ್ಯಾಸ ಮತ್ತು ಅಭಿವೃದ್ಧಿ: ಇಸ್ರೊದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್
ಬ್ಲೂಬರ್ಡ್ ಬ್ಲಾಕ್–2 ಉಪಗ್ರಹ ಉಡಾವಣೆಯ ಮೂಲಕ ಭಾರತಕ್ಕೆ ಇಸ್ರೊ ಹೊಸ ವರ್ಷ ಮತ್ತು ಕ್ರಿಸ್‌ಮಸ್ ಉಡುಗೊರೆ ನೀಡಿದೆವಿ.ನಾರಾಯಣನ್ ಇಸ್ರೊ ಅಧ್ಯಕ್ಷ
ಭಾರತದ ಬಾಹ್ಯಾಕಾಶ ಪಯಣದಲ್ಲಿ ಇದು ಮಹತ್ವದ ಮೈಲುಗಲ್ಲಾಗಿದೆ. ಗಗನಯಾನದಂತಹ ಭವಿಷ್ಯದ ಯೋಜನೆಗಳಿಗೆ ಬಲವಾದ ಅಡಿಪಾಯವನ್ನು ಒದಗಿಸಿದೆನರೇಂದ್ರ ಮೋದಿ ಪ್ರಧಾನಿ
ಉಪಗ್ರಹದ ವಿಶೇಷತೆ
*ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಹೈ ಸ್ಪೀಡ್ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ಪೂರೈಸುವ ಸಾಮರ್ಥ್ಯ ಹೊಂದಿದೆ
*ಈ ಬಾಹ್ಯಾಕಾಶ ಕಾರ್ಯಕ್ರಮವು ಉಪಗ್ರಹದ ಮೂಲಕ ನೇರವಾಗಿ ಮೊಬೈಲ್ ಸಂಪರ್ಕ ಒದಗಿಸುತ್ತದೆ. ಇದರಿಂದ ಪ್ರತಿಯೊಬ್ಬರಿಗೂ ಎಲ್ಲ ಸಮಯದಲ್ಲಿಯೂ 4ಜಿ 5ಜಿ ಧ್ವನಿ ವಿಡಿಯೊ ಕರೆ ಟೆಕ್ಸ್ಟ್ ಸ್ಟ್ರೀಮಿಂಗ್ ಮತ್ತು ಡೇಟಾ ಸೌಲಭ್ಯ ದೊರೆಯಲಿದೆ
*ಎಎಸ್‌ಟಿ ಸ್ಪೇಸ್‌ಮೊಬೈಲ್ ಕಂಪನಿಯು ಇದೇ ಮೊದಲ ಬಾರಿಗೆ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ನಿರ್ಮಿಸುತ್ತಿದೆ. ಇದನ್ನು ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಳಕೆ ಮಾಡಬಹುದು. ಇದನ್ನು ಸರ್ಕಾರಿ ಮತ್ತು ವಾಣಿಜ್ಯ ಸೇವೆಗಳ ಅಪ್ಲಿಕೇಷನ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ
‘ಗಗನಯಾನ ಯೋಜನೆಗೆ ಮತ್ತಷ್ಟು ಬಲ’
ಬ್ಲೂಬರ್ಡ್ ಬ್ಲಾಕ್ –2 ಉಪಗ್ರಹದ ಯಶಸ್ವಿ ಉಡ್ಡಯನವು ಮಾನವ ಸಹಿತ ಗಗನಯಾನ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ನಡೆಸುವ ಭಾರತದ ಮಹತ್ವಾಕಾಂಕ್ಷೆಗೆ ಮತ್ತಷ್ಟು ಆತ್ಮವಿಶ್ವಾಸವನ್ನು ತುಂಬಿದೆ ಎಂದು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಅವರು ಬುಧವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಅಮೆರಿಕದ ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಸೇರಿಸುವ ಈ ಕಾರ್ಯಕ್ರಮವು ಬಹಳ ಮಹತ್ವದ್ದಾಗಿತ್ತು. ಏಕೆಂದರೆ ಭಾರತದ ಗಗನಯಾನ ಯೋಜನೆಯಲ್ಲಿಯೂ ಎಲ್‌ವಿಎಂ3 ಬಾಹ್ಯಾಕಾಶ ನೌಕೆಯು ನಿರ್ಣಾಯಕ ಪಾತ್ರ ವಹಿಸಲಿದೆ. ಭಾರತದ ಗಗನಯಾನಿಗಳನ್ನು ಕಕ್ಷೆಗೆ ಕೊಂಡೊಯ್ಯಲಿದೆ ಮತ್ತು ಸುರಕ್ಷಿತವಾಗಿ ಭೂಮಿಗೆ ಮರಳಿ ಕರೆತರಲಿದೆ’ ಎಂದು ಹೇಳಿದರು. ಈ ಎಲ್‌ವಿಎಂ3 ನೌಕೆಯು ಬ್ಲೂಬರ್ಡ್ ಬ್ಲಾಕ್–2 ಉಪಗ್ರಹವನ್ನು ನಿಗದಿತ ಕಕ್ಷೆಗೆ ನಿಖರವಾಗಿ ಸೇರಿಸಿದೆ. ಈ ನೌಕೆಯು ಶೇ 100ರಷ್ಟು ವಿಶ್ವಾಸಾರ್ಹತೆಯನ್ನು ಹೊಂದಿದೆ ಎಂದು ತಿಳಿಸಿದರು. ‘520 ಕಿ.ಮೀ ದೂರದ ಸೆಲ್ಯುಲಾರ್ ಕಕ್ಷೆಗೆ ಉಪಗ್ರಹವನ್ನು ಸೇರಿಸುವ ಗುರಿ ಹೊಂದಲಾಗಿತ್ತು. ಸದ್ಯ 518.8 ಕಿ.ಮೀ ದೂರದ ಕಕ್ಷೆಗೆ ಸೇರಿಸಲಾಗಿದೆ. ಜಗತ್ತಿನ ಅತ್ಯುತ್ತಮ ಉಪಗ್ರಹ ಉಡಾವಣೆಗಳಲ್ಲಿ ಇದೂ ಒಂದು’ ಎಂದು ಅವರು ಬಣ್ಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.