ಚೆನ್ನೈ: ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನು ಜೋಡಿಸುವ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪೆರಿಮೆಂಟ್’ (ಸ್ಪೇಡೆಕ್ಸ್) ಕಾರ್ಯಾಚರಣೆಯು ಗುರುವಾರ ಯಶಸ್ವಿಯಾಗಿದೆ. ಈ ಐತಿಹಾಸಿಕ ಸಾಧನೆಗಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ (ಇಸ್ರೊ) ಶುಭಾಶಯಗಳ ಮಹಾಪೂರವೇ ಹರಿದುಬಂದಿತು. ಈ ಮೂಲಕ ಉಪಗ್ರಹ ಜೋಡಣೆ ತಂತ್ರಜ್ಞಾನ ಕರಗತ ಮಾಡಿಕೊಂಡ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಯಿತು.
ಬಾಹ್ಯಾಕಾಶಕ್ಕೆ ಮನುಷ್ಯನನ್ನು ಕಳುಹಿಸುವ ‘ಗಗನಯಾನ’ ಯೋಜನೆ, ಚಂದ್ರಯಾನ 4, ಚಂದ್ರನ ಮೇಲ್ಮೈನಲ್ಲಿನ ಮಣ್ಣಿನ ಮಾದರಿಗಳನ್ನು ತರುವುದು, ಭಾರತೀಯ ಅಂತರಿಕ್ಷ ಕೇಂದ್ರ (ಬಿಎಎಸ್) ಸ್ಥಾಪನೆ ಸೇರಿದಂತೆ ಭಾರತದ ಭವಿಷ್ಯದ ಮಹತ್ವದ ಬಾಹ್ಯಾಕಾಶ ಯೋಜನೆಗಳಿಗೆ ಇಸ್ರೊದ ಈ ಯಶಸ್ಸು ನಾಂದಿಯಾಗಲಿದೆ.
2024ರ ಡಿಸೆಂಬರ್ 30ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಚೇಸರ್ ಮತ್ತು ಟಾರ್ಗೆಟ್ ಎಂಬ ಹೆಸರಿನ ಎರಡು ಪುಟ್ಟ (ಒಂದು ರೆಫ್ರಿಜರೇಟರ್‌ನಷ್ಟು ದೊಡ್ಡದಾದ) ಉಪಗ್ರಹಗಳನ್ನು ಉಡ್ಡಯನ ಮಾಡಲಾಗಿತ್ತು.
ಜ.7ರಂದು ಈ ಉಪಗ್ರಹಗಳ ಜೋಡಣೆ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣಗಳಿಂದ ಈ ಪ್ರಕ್ರಿಯೆಯನ್ನು ಎರಡು ಬಾರಿ ಇಸ್ರೊ ಮುಂದೂಡಿತ್ತು. ಈಗ, ಉಪಗ್ರಹಗಳ ಜೋಡಣೆ ಕಾರ್ಯಾಚರಣೆಯು ಗುರುವಾರ ಯಶಸ್ವಿಯಾಗಿದೆ. ಉಪಗ್ರಹಗಳನ್ನು ಜೋಡಣೆ ಮಾಡುವುದೊಂದೆ ಈ ಯೋಜನೆಯ ಉದ್ದೇಶವಲ್ಲ. ಈ ಉಪಗ್ರಹಗಳನ್ನು ಬೇರ್ಪಡಿಸುವುದೂ ಈ ಯೋಜನೆಯ ಭಾಗವೇ ಆಗಿದೆ. ಈ ಪ್ರಕ್ರಿಯೆಯು 2–3 ದಿನಗಳಲ್ಲಿ ನಡೆಯಲಿದೆ ಎಂದು ಇಸ್ರೊ ಹೇಳಿದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೂಲಕ 24 ಪೇಲೋಡ್‌ಗಳೊಂದಿಗೆ ಎಸ್‌ಡಿಎಕ್ಸ್ 01 (ಚೇಸರ್) ಮತ್ತು ಎಸ್‌ಡಿಎಕ್ಸ್ 02 (ಟಾರ್ಗೆಟ್) ಎಂಬ ಎರಡು ಸಣ್ಣ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ಸಿ 60 ರಾಕೆಟ್ ನಭಕ್ಕೆ ಚಿಮ್ಮತ್ತು. 15 ನಿಮಿಷಗಳ ನಂತರ ಯೋಜನೆಯಂತೆ ತಲಾ 220 ಕೆ.ಜಿ ತೂಕದ ಎರಡು ಬಾಹ್ಯಾಕಾಶ ನೌಕೆಗಳನ್ನು 475 ಕಿ.ಮೀ ವೃತ್ತಾಕಾರದ ಕಕ್ಷೆಗೆ ಸೇರಿಸಿತ್ತು.
ಬಾಹ್ಯಾಕಾಶದಲ್ಲಿ, ಸಾಮಾನ್ಯ ಮಿಷನ್ ಉದ್ದೇಶಗಳನ್ನು ಸಾಧಿಸಲು ಬಹು ರಾಕೆಟ್ ಉಡಾವಣೆಗಳು ಅಗತ್ಯವಿರುವಾಗ ಡಾಕಿಂಗ್ ತಂತ್ರಜ್ಞಾನವು ಅತ್ಯಗತ್ಯವಾಗಿರುತ್ತದೆ.
‘ಸ್ಪೇಡೆಕ್ಸ್’ ಯೋಜನೆಯ ಯಶಸ್ಸು ಭಾರತೀಯ ಅಂತರಿಕ್ಷ ನಿಲ್ದಾಣ ಮತ್ತು ಚಂದ್ರನ ಮೇಲೆ ಗಗನಯಾತ್ರಿಯನ್ನು ಇಳಿಸುವುದು ಮುಂತಾದ ಭವಿಷ್ಯದ ಕಾರ್ಯಾಚರಣೆಗಳಿಗೆ ನಿರ್ಣಾಯಕ ಸಂಕೀರ್ಣ ತಂತ್ರಜ್ಞಾನಗಳಿಗೆ ದೇಶಕ್ಕೆ ನೆರವಾಗಲಿದೆ.
ಉಪಗ್ರಹಗಳ ಜೋಡಣೆಯು ಯಶಸ್ವಿಯಾಗಿದೆ. ಇದೊಂದು ಐತಿಹಾಸಿಕ ಗಳಿಗೆ. ಜೋಡಣೆ ಪ್ರಕ್ರಿಯೆ ಬಳಿಕ ಉಪಗ್ರಹಗಳು ನಮ್ಮ ನಿಯಂತ್ರಣದಲ್ಲಿವೆಇಸ್ರೊ
ಭವಿಷ್ಯದ ನಮ್ಮ ಬಾಹ್ಯಾಕಾಶ ಯೋಜನೆಗಳಿಗೆ ಈ ಯಶಸ್ಸು ಮೊದಲ ಮೆಟ್ಟಿಲಾಗಲಿದೆ. ಎಲ್ಲ ವಿಜ್ಞಾನಿಗಳೂ ಅಭಿನಂದನೆಗೆ ಅರ್ಹರುನರೇಂದ್ರ ಮೋದಿ, ಪ್ರಧಾನಿ
ಕೊನೆಗೂ ಇಸ್ರೊ ಸಾಧಿಸಿ ತೋರಿಸಿತು. ಪ್ರಧಾನಿ ಮೋದಿ ಅವರ ನಿರಂತರ ಪ್ರೋತ್ಸಾಹವು ಇಲ್ಲಿ ಬೆಂಗಳೂರಿನಲ್ಲಿ ಚೈತನ್ಯ ತುಂಬುತ್ತಿದೆಜಿತೇಂದ್ರ ಸಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ
ಭಾರತದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಇದು ಪ್ರಮುಖ ಹೆಜ್ಜೆಯಾಗಿದೆ. ಇದು ದೇಶದ ಸಾಮೂಹಿಕ ಸಾಧನೆಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.