ADVERTISEMENT

2024ರಲ್ಲಿ 12ರಿಂದ 14 ಉಪಗ್ರಹಗಳ ಉಡಾವಣೆ: ಇಸ್ರೊ

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 16:28 IST
Last Updated 1 ಜನವರಿ 2024, 16:28 IST
ಇಸ್ರೊ
ಇಸ್ರೊ    

ಚೆನ್ನೈ: ಉಪಗ್ರಹ ಉಡಾವಣಾ ವಾಹಕಗಳಾದ ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಮತ್ತು ಎಸ್‌ಎಸ್‌ಎಲ್‌ವಿ ಮೂಲಕ 12ರಿಂದ 14 ಉಪಗ್ರಹಗಳನ್ನು 2024ನೇ ಸಾಲಿನಲ್ಲಿ ಉಡಾವಣೆ ಮಾಡುವ ಯೋಜನೆ ಇದೆ  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.

ಎಕ್ಸ್‌ಪೊಸ್ಯಾಟ್‌ ಯಶಸ್ವಿ ಉಡಾವಣೆ ಬಳಿಕ, ಇನ್ಸ್ಯಾಟ್‌–3ಡಿಎಸ್‌ ಉಪಗ್ರಹವನ್ನು ಉಡಾವಣೆಗೆ ಮಾಡಲಾಗುವುದು. ಇದು ಈ ವರ್ಷ ಉಡಾವಣೆ ಆಗಲಿರುವ ಎರಡನೇ ಉಪಗ್ರಹವಾಗಲಿದೆ ಎಂದು ಇಸ್ರೊ ತಿಳಿಸಿದೆ.

‘2024 ನಮಗೆ ಬಿಡುವಿಲ್ಲದ ವರ್ಷವಾಗಿದೆ. ತಿಂಗಳಿಗೊಂದರಂತೆ ಬಾಹ್ಯಾಕಾಶ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಅದರಂತೆ ಈ ವರ್ಷ 12– 14 ಉಪಗ್ರಹಗಳಗಳನ್ನು ಉಡಾವಣೆ ಮಾಡಲು ನಾವು ಯೋಜನೆ ಹಮ್ಮಿಕೊಂಡಿದ್ದೇವೆ’ ಎಂದು ಇಸ್ರೊ ಅಧ್ಯಕ್ಷ ಎಸ್‌. ಸೋಮನಾಥ್‌ ಅವರು ತಿಳಿಸಿದ್ದಾರೆ. ಇನ್‌ಸ್ಯಾಟ್‌– 3ಡಿಎಸ್‌ ಹವಾಮಾನ ಮುನ್ಸೂಚನೆ ನೀಡುವ ಉಪಗ್ರಹವಾಗಿದೆ. ಇದನ್ನು ಜಿಎಸ್‌ಎಲ್‌ವಿ ಎಂಕೆ– 2 ಉಡಾವಣಾ ವಾಹನದ ಮೂಲಕ ಉಡಾವಣೆ ಮಾಡಲಾಗುತ್ತದೆ. 

ADVERTISEMENT

ಜ.6ಕ್ಕೆ ಗುರಿ ತಲುಪಲಿರುವ ಆದಿತ್ಯ ಎಲ್‌–1

‘ಸೂರ್ಯನ ಅಧ್ಯಯನ ಉದ್ದೇಶದ ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್‌1 ಉಪಗ್ರಹವು ಜನವರಿ 6ರಂದು ತನ್ನ ಗಮ್ಯಸ್ಥಾನವಾದ ಲಾಗ್ರೇಂಜಿಯನ್‌ ಪಾಯಿಂಟ್‌ (ಎಲ್‌1) ತಲುಪಲಿದೆ. ಅದು ಅಲ್ಲಿಯೇ ನೆಲೆಗೊಂಡು, ಸೂರ್ಯನ ಅಧ್ಯಯನ ನಡೆಸಲು ಅಗತ್ಯವಿರುವ ತಾಂತ್ರಿಕ ಬದಲಾವಣೆಗಳನ್ನು ನಾವು ಮಾಡುತ್ತೇವೆ’ ಎಂದು ಇಸ್ರೊ ಅಧ್ಯಕ್ಷ ಎಸ್‌. ಸೋಮನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.