ADVERTISEMENT

ಓರೆಯಾಗಿ ಉರುಳಿರುವ ವಿಕ್ರಂ ಲ್ಯಾಂಡರ್‌; ಸಂಪರ್ಕ ಸಾಧಿಸಲು ಇಸ್ರೊ ನಿರಂತರ ಯತ್ನ

14 ದಿನಗಳ ಅವಕಾಶ

ಏಜೆನ್ಸೀಸ್
Published 9 ಸೆಪ್ಟೆಂಬರ್ 2019, 10:42 IST
Last Updated 9 ಸೆಪ್ಟೆಂಬರ್ 2019, 10:42 IST
   

ಬೆಂಗಳೂರು: ಚಂದ್ರನ ಅಂಗಳದಲ್ಲಿ ಪತ್ತೆಯಾಗಿರುವ ವಿಕ್ರಂ ಲ್ಯಾಂಡರ್‌ನೊಂದಿಗೆ ಸಂಪರ್ಕ ಸಾಧಿಸಲು ಚಂದ್ರಯಾನ 2 ಯೋಜನೆಯ ಇಸ್ರೊ ತಂಡ ನಿರಂತರ ಪ್ರಯತ್ನ ನಡೆಸುತ್ತಿದೆ. ಹಗುರವಾಗಿ ನೆಲವನ್ನು ಸ್ಪರ್ಶಿಸಲು ಸಾಧ್ಯವಾಗದೆ ವೇಗವಾಗಿ ನೆಲಕ್ಕೆ ಅಪ್ಪಳಿಸಿರುವುದನ್ನು ಚಿತ್ರದ ಮೂಲಕ ಗಮನಿಸಲಾಗಿದೆ.

ಚಂದ್ರನನ್ನು ಸುತ್ತುತ್ತಿರುವ ಚಂದ್ರಯಾನ 2ರ ಆರ್ಬಿಟರ್‌ ಭಾನುವಾರ ಥರ್ಮಲ್‌ ಇಮೇಜ್‌ ಕ್ಲಿಕ್ಕಿಸಿ ಕಳುಹಿಸಿತ್ತು. ಇದರಿಂದಾಗಿ ಚಂದ್ರನ ಅಂಗಳಕ್ಕೆ ವಿಕ್ರಂ ಲ್ಯಾಂಡರ್‌ ಇಳಿದಿರುವುದನ್ನು ಇಸ್ರೊ ಖಚಿತ ಪಡಿಸಿಕೊಂಡು ಸಂಪರ್ಕ ಸಾಧಿಸುವ ಯತ್ನವನ್ನು ಮತ್ತಷ್ಟು ಚುರುಕುಗೊಳಿಸಿದೆ. ಆರ್ಬಿಟರ್‌ ತನ್ನ ಹೈರೆಸಲ್ಯೂಷನ್‌ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಚಿತ್ರದ ಮೂಲಕ ಲ್ಯಾಂಡರ್‌ ಓರೆಯಾಗಿ ಉರುಳಿರುವುದನ್ನು ಇಸ್ರೊ ವಿಜ್ಞಾನಿಗಳು ಗುರುತಿಸಿದ್ದಾರೆ.

‘ಹಗುರವಾಗಿ ಇಳಿಸಲು ಯೋಜಿಸಿದ್ದ ಸ್ಥಳದ ಸಮೀಪದಲ್ಲಿಯೇ ಲ್ಯಾಂಡರ್‌ ಅಪ್ಪಳಿಸಿದೆ. ಆರ್ಬಿಟರ್‌ ಕಳಿಸಿರುವ ಚಿತ್ರದಿಂದ ಇದನ್ನು ತಿಳಿಯಲಾಗಿದೆ. ಲ್ಯಾಂಡರ್‌ ತುಂಡಾಗಿಲ್ಲ ಬಿದ್ದಿಲ್ಲ, ಆದರೆ ಓರೆಯಾಗಿ ಕುಳಿತಿದೆ‘ ಎಂದು ಇಸ್ರೊ ಅಧಿಕಾರಿಯೊಬ್ಬರು ಸೋಮವಾರ ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್‌ 7ರ ಬೆಳಗಿನ ಜಾವ ಚಂದ್ರನ ಅಂಗಳದತ್ತ ಇಳಿಯುತ್ತಿದ್ದ ವಿಕ್ರಂ ಲ್ಯಾಂಡರ್‌ ನೆಲದಿಂದ 2.1 ಕಿ.ಮೀ. ಅಂತರದಲ್ಲಿದ್ದಾಗ ಇಸ್ರೊದೊಂದಿಗಿನ ಸಂಪರ್ಕ ಕಡಿತಗೊಂಡಿದೆ. ಲ್ಯಾಂಡರ್‌ನೊಂದಿಗೆ ಸಂಪರ್ಕ ಸಾಧಿಸದೆ ವಿಕ್ರಂ ಒಳಗಿರುವ ‘ಪ್ರಜ್ಞಾನ್‌‘ ರೋವರ್‌ ಹೊರಗಿಳಿಸಿ ಶೋಧಕಾರ್ಯ ನಡೆಸಲು ಸಾಧ್ಯವಿಲ್ಲ.

ಲ್ಯಾಂಡರ್‌ ಮತ್ತು ರೋವರ್‌ ಎರಡರ ಕಾರ್ಯಾಚರಣೆ ಅವಧಿ 14 ದಿನಗಳು ಮಾತ್ರ(ಇನ್ನು 12 ದಿನಗಳು). ಅಷ್ಟರೊಳಗೆ ವಿಕಂನೊಂದಿಗೆ ಸಂಪರ್ಕ ಸಾಧಿಸಲು ಇಸ್ರೊ ತಂಡ ಇಸ್ರೊಟೆಲಿಮೆಟ್ರಿ, ಟ್ರ್ಯಾಕಿಂಗ್‌ ಮತ್ತು ಕಮಾಂಡ್‌ ನೆಟ್‌ವರ್ಕ್‌(ಐಎಸ್‌ಟಿಆರ್‌ಎಸಿ)ಯಲ್ಲಿ ಕಾರ್ಯನಿರತವಾಗಿದೆ.

‘ಲ್ಯಾಂಡರ್‌ ಯೋಜಿಸಿದಂತೆ ಹಗುರವಾಗಿ ಚಂದ್ರನ ಅಂಗಳಕ್ಕೆ ಇಳಿದಿದ್ದರೆ ಸಂಪರ್ಕ ಸಾಧಿಸುವ ಅವಕಾಶ ದಟ್ಟವಾಗಿತ್ತು. ರಭಸದಿಂದ ಅಪ್ಪಳಿಸಿರುವುದರಿಂದ ಲ್ಯಾಂಡರ್‌ನೊಳಗೆ ಎಲ್ಲ ವ್ಯವಸ್ಥೆ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಮಾತ್ರವೇ ಸಂಪರ್ಕ ಸಾಧ್ಯವಾಗಲಿದೆ‘ ಎಂದು ಇಸ್ರೊ ವಿಜ್ಞಾನಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

’ಲ್ಯಾಂಡರ್‌ನೊಂದಿಗೆ ಮತ್ತೆ ಸಂಪರ್ಕ ಸಾಧನೆ ಹಾಗೂ ಅದು ಕಾರ್ಯಾಚರಿಸುವಂತೆ ಆಗುವುದನ್ನು ತಳ್ಳಿ ಹಾಕುವಂತಿಲ್ಲ‘ ಎಂದು ಮತ್ತೊಬ್ಬ ಅಧಿಕಾರಿ ಭರವಸೆ ವ್ಯಕ್ತಪಡಿಸಿದ್ದಾರೆ.

’ವಿಕ್ರಂ ಲ್ಯಾಂಡರ್‌ಗೆ ಅಗತ್ಯವಿರುವ ಶಕ್ತಿಯನ್ನು ಅದರ ಸುತ್ತಲೂ ಅಳವಡಿಸಲಾಗಿರುವ ಸೌರಫಲಕಗಳ ಮೂಲಕ ಪಡೆದುಕೊಳ್ಳುತ್ತದೆ ಹಾಗೂ ಅದರೊಳಗಿನ ಬ್ಯಾಟರಿಗಳನ್ನು ಈವರೆಗೂ ಹೆಚ್ಚು ಬಳಕೆ ಮಾಡಿಲ್ಲ. ಆ ಮೂಲಕವೂ ಅಗತ್ಯ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಈಗಾಗಲೇ ಲ್ಯಾಂಡರ್‌ ನೆಲದಲ್ಲಿ ಇಳಿದಿರುವುದರಿಂದ ಅದರ ಮಾರ್ಗವನ್ನು ಬದಲಿಸಲು ಸಾಧ್ಯವಿಲ್ಲ. ಮುಖ್ಯವಾಗಿ ಅದರ ಆಂಟೆನಾಗಳು ಆರ್ಬಿಟರ್‌ ಕಡೆಗೆ ಅಥವಾ ಇಸ್ರೊದ ಗ್ರೌಂಡ್‌ ಸ್ಟೇಷನ್‌ ಕಡೆಗೆ ಮುಖ ಮಾಡಿರಬೇಕು,... ಈ ಎಲ್ಲದರ ನಡುವೆಯೂ ಭರವಸೆಯೊಂದಿಗೆ ಪಯತ್ನ ಮುಂದುವರಿದಿರುವುದಾಗಿ‘ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.