ADVERTISEMENT

ರೈಲ್ವೆ ನೇಮಕಾತಿ ಪರೀಕ್ಷಾ ಅಕ್ರಮ: ತನಿಖೆಗೆ ರಾಜ್ಯಸಭೆಯಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 11:29 IST
Last Updated 2 ಫೆಬ್ರುವರಿ 2022, 11:29 IST
ಸಂಸತ್‌ ಭವನ
ಸಂಸತ್‌ ಭವನ   

ನವದೆಹಲಿ: ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಕಳೆದ ತಿಂಗಳು ಹಿಂಸಾಚಾರಕ್ಕೆ ಕಾರಣವಾದ ರೈಲ್ವೆ ತಾಂತ್ರಿಕೇತರ ಹುದ್ದೆಗಳ (ಎನ್‌ಟಿಪಿಸಿ) ಹಾಗೂ ‘ಲೆವೆಲ್‌ 1’ ಪರೀಕ್ಷೆಯಲ್ಲಿನ ಅಕ್ರಮ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಸಭಾ ಸದಸ್ಯರು ಬುಧವಾರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಶೂನ್ಯವೇಳೆಯಲ್ಲಿ ಎನ್‌ಸಿಪಿ ಸದಸ್ಯ ಫೌಜಿಯಾ ಖಾನ್‌ಈ ಕುರಿತು ಪ್ರಸ್ತಾಪಿಸಿದರು.ರೈಲ್ವೆ ಪರೀಕ್ಷೆಯ ಈ ನೇಮಕಾತಿ ಪ್ರಕ್ರಿಯೆಯು ದೇಶದ ನಿರುದ್ಯೋಗ ಸಮಸ್ಯೆ ಮತ್ತು ಶಿಕ್ಷಣ ವ್ಯವಸ್ಥೆಯ ವೈಫಲ್ಯವನ್ನು ಬಹಿರಂಗಪಡಿಸಿದೆ ಎಂದರು.

ಎನ್‌ಟಿಪಿಸಿಪರೀಕ್ಷೆಯ ದೋಷಪೂರಿತ ಫಲಿತಾಂಶಗಳ ವಿರುದ್ಧ ರೈಲ್ವೆ ಉದ್ಯೋಗ ಆಕಾಂಕ್ಷಿಗಳು ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದರು.ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಆರೋಪಿಸಿರುವ ಅಕ್ರಮಗಳನ್ನು ಪರಿಶೀಲಿಸಿ ಸರಿಪಡಿಸಬೇಕು ಎಂದು ಅವರು ಕೋರಿದರು.

ADVERTISEMENT

ಬಿಜೆಪಿ ಸದಸ್ಯ ಸುಶಿಲ್‌ ಕುಮಾರ್‌ ಮೋದಿ, ‘ಮೊದಲಿಗೆ ಗ್ರೂಪ್‌ ಡಿ ಹುದ್ದೆಗಳಿಗೆ ಒಂದು ಪರೀಕ್ಷೆಯನ್ನು ಘೋಷಿಸಲಾಗಿತ್ತು. ಬಳಿಕ ಏಕಾಏಕಿ ಎರಡು ಪರೀಕ್ಷೆಗಳಿರುವುದಾಗಿ ಘೋಷಿಸಲಾಯಿತು’ ಎಂದರು.

ಇದೇನು ಐಎಎಸ್‌ ಮತ್ತು ಐಪಿಎಸ್‌ ಪರೀಕ್ಷೆಗಳಲ್ಲವಾದ ಕಾರಣ ಎರಡು ಪರೀಕ್ಷೆಗಳ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಎಎಪಿ ಸದಸ್ಯ ಸಂಜಯ್‌ ಸಿಂಗ್‌, ರೈಲ್ವೆ ಇಲಾಖೆ ಪ್ರಕಟಿಸಿದ ಫಲಿತಾಂಶಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಫಲಿತಾಂಶ ವಿರೋಧಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಹಾಕಲಾಗಿರುವ ಎಫ್‌ಐಆರ್‌ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.