ADVERTISEMENT

ಮಾನ್ಯತೆ ರಹಿತ ರಾಜಕೀಯ ಪಕ್ಷಗಳ ವಿರುದ್ಧ ತನಿಖೆ: ದೇಶದಾದ್ಯಂತ ಐ.ಟಿ ದಾಳಿ

ಪಿಟಿಐ
Published 7 ಸೆಪ್ಟೆಂಬರ್ 2022, 17:24 IST
Last Updated 7 ಸೆಪ್ಟೆಂಬರ್ 2022, 17:24 IST
ಆದಾಯ ತೆರಿಗೆ ಇಲಾಖೆ
ಆದಾಯ ತೆರಿಗೆ ಇಲಾಖೆ   

ನವದೆಹಲಿ: ‘ನೋಂದಾಯಿತ, ಮಾನ್ಯತೆ ಇಲ್ಲದ ರಾಜಕೀಯ ಪಕ್ಷ’ಗಳ (ಆರ್‌ಯುಪಿಪಿ) ವಿರುದ್ಧದ ತೆರಿಗೆ ವಂಚನೆ ಆರೋಪ ಹಾಗೂ ಅವುಗಳು ನಡೆಸಿವೆ ಎನ್ನಲಾದ ಸಂಶಯಾಸ್ಪದ ಹಣ
ಕಾಸು ವ್ಯವಹಾರಗಳ ಕುರಿತ ತನಿಖೆಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿವಿಧ ರಾಜ್ಯಗಳಲ್ಲಿ ಬುಧವಾರ ದಾಳಿ ನಡೆಸಿದ್ದಾರೆ.

ಗುಜರಾತ್, ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸಗಡ, ಹರಿಯಾಣ ಸೇರಿದಂತೆ ಕನಿಷ್ಠ 110 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ.

‘ಆರ್‌ಯುಪಿಪಿಗಳು ಹಾಗೂ ಅವರು ಪ್ರವರ್ತಕರ ಆದಾಯದ ಮೂಲ ಹಾಗೂ ವೆಚ್ಚ ಕುರಿತು ಇಲಾಖೆಯು ತನಿಖೆ ಕೈಗೊಂಡಿದೆ. ಕಾನೂನು ಬಾಹಿರವಾಗಿ ಈ ಪಕ್ಷಗಳು ದೇಣಿಗೆ ಪಡೆಯುತ್ತಿವೆ ಎಂಬ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಆರ್‌ಯುಪಿಪಿಗಳಿಗೆ ಸಂಬಂಧಿಸಿ ಇತ್ತೀಚೆಗೆ ಚುನಾವಣಾ ಆಯೋಗವು ಮಾಡಿದ್ದ ಶಿಫಾರಸಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಆರ್‌ಯುಪಿಪಿಗಳಿಗೆ ಸಂಬಂಧಿಸಿ ಇತ್ತೀಚೆಗೆ ಆಯೋಗವು ಭೌತಿಕ ಪರಿಶೀಲನೆ ಕೈಗೊಂಡಿತ್ತು. ಈ ಪೈಕಿ ಅಸ್ತಿತ್ವದಲ್ಲಿಯೇ ಇರದ 198 ಪಕ್ಷಗಳನ್ನು ಆರ್‌ಯುಪಿಪಿ ಪಟ್ಟಿಯಿಂದ ಆಯೋಗವು ತೆಗೆದುಹಾಕಿತ್ತು.

ಕಾಯ್ದೆ ಹಾಗೂ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ 2,100ಕ್ಕೂ ಅಧಿಕ ಆರ್‌ಯುಪಿಪಿಗಳ ವಿರುದ್ಧ ಕ್ರಮ ತೆಗೆದು
ಕೊಳ್ಳುವುದಾಗಿಯೂ ಆಯೋಗ ಹೇಳಿತ್ತು. ಅಧಿಕೃತ ಮೂಲಗಳ ಪ್ರಕಾರ, ದೇಶದಲ್ಲಿ 2,800 ನೋಂದಾಯಿತ, ಮಾನ್ಯತೆರಹಿತ ಪಕ್ಷಗಳಿವೆ.

ಎನ್‌ಜಿಒಗಳ ಮೇಲೂ ದಾಳಿ: ಈ ನಡುವೆಯೇ,ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ (ಎಫ್‌ಸಿಆರ್‌ಎ) ಉಲ್ಲಂಘನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಭಾಗವಾಗಿ ದೆಹಲಿ ಮೂಲದ ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ಸೆಂಟರ್‌ ಫಾರ್‌ ರಿಸರ್ಚ್‌ (ಸಿಪಿಆರ್‌) ಮತ್ತು ಜಾಗತಿಕ ಮಟ್ಟದ ಎನ್‌ಜಿಒ ಆಕ್ಸ್‌ಫ್ಯಾಮ್‌ ಇಂಡಿಯಾ ಮತ್ತು ಬೆಂಗಳೂರು ಮೂಲದ ಮಾಧ್ಯಮ ಸಂಸ್ಥೆಯಾದ ಇಂಡಿಪೆಂಡೆಂಟ್‌ ಆ್ಯಂಡ್‌ ಪಬ್ಲಿಕ್‌ ಸ್ಪಿರಿಟೆಡ್‌ ಮೀಡಿಯ ಫೌಂಡೇಷನ್‌(ಐಪಿಎಸ್‌ಎಂಎಫ್‌) ಮೇಲೂ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.‌

ಈ ಸಂಸ್ಥೆಗಳು ಎಫ್‌ಸಿಆರ್‌ಎ ಮೂಲಕ ಪಡೆದಿರುವ ದೇಣಿಗೆಯ ರಶೀದಿ ಮತ್ತು ಸಂಸ್ಥೆಗಳ ಬ್ಯಾಲೆನ್ಸ್‌ ಶೀಟ್‌ಗಳನ್ನು ಐ.ಟಿ. ಇಲಾಖೆ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ. ಆದರೆ ದಾಳಿ ಕುರಿತು ಈ ಯಾವ ಸಂಸ್ಥೆಗಳೂ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.