ADVERTISEMENT

ಕಾಂಗ್ರೆಸ್‌ ಇಲ್ಲದ ವಿಪಕ್ಷಗಳ ಒಕ್ಕೂಟ ಸಾಧ್ಯವಿಲ್ಲ: ಸಂಜಯ್ ರಾವುತ್

ರಾಹುಲ್ ಭೇಟಿಯ ನಂತರ ಸೇನಾ ನಾಯಕ ಸಂಜಯ್ ರಾವುತ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 19:33 IST
Last Updated 7 ಡಿಸೆಂಬರ್ 2021, 19:33 IST
ಸಂಜಯ್ ರಾವುತ್
ಸಂಜಯ್ ರಾವುತ್   

ನವದೆಹಲಿ: ‘ದೇಶದಲ್ಲಿ ಬಿಜೆಪಿಗೆ ವಿರುದ್ಧವಾಗಿ, ವಿರೋಧ ಪಕ್ಷಗಳ ಒಂದು ಒಕ್ಕೂಟ ಮಾತ್ರ ಇರಬೇಕು. ಆದರೆ ಕಾಂಗ್ರೆಸ್ ಇಲ್ಲದ ವಿರೋಧ ಪಕ್ಷಗಳ ಒಕ್ಕೂಟ ಸಾಧ್ಯವಿಲ್ಲ’ ಎಂದು ಶಿವಸೇನಾ ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.

ಯುಪಿಎ ಎಲ್ಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನೀಡಿದ್ದ ಹೇಳಿಕೆಯನ್ನು ಶಿವಸೇನಾ ಈ ಮೂಲಕ ನಿರಾಕರಿಸಿದೆ. ರಾಹುಲ್ ಗಾಂಧಿ ಅವರನ್ನುಮಂಗಳವಾರ ಇಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ರಾವುತ್ ಈ ಮಾತು ಹೇಳಿದ್ದಾರೆ.

‘ಕಾಂಗ್ರೆಸ್‌ ಇಲ್ಲದ ವಿರೋಧ ಪಕ್ಷಗಳ ಒಕ್ಕೂಟ ರಚನೆ ಸಾಧ್ಯವಿಲ್ಲ. ಆದರೆ ಒಕ್ಕೂಟವನ್ನು ಯಾರು ಮುನ್ನಡೆಸಬೇಕು ಎಂಬುದನ್ನು ಎಲ್ಲಾ ವಿರೋಧ ಪಕ್ಷಗಳು ಚರ್ಚಿಸಿ ನಿರ್ಧರಿಸಬೇಕು’ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.

ADVERTISEMENT

ಯುಪಿಎಗೆಶಿವಸೇನಾ ಸೇರುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ, ‘ನಾವು ಈಗಾಗಲೇ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದ್ದೇವೆ. ಸಭೆಯಲ್ಲಿ
ಏನು ಮಾತನಾಡಿದೆವು ಎಂಬುದರ ಬಗ್ಗೆ ಪಕ್ಷದ ಮುಖ್ಯಸ್ಥರಾದ ಉದ್ಧವ್ ಠಾಕ್ರೆ ಅವರ ಬಳಿ ಚರ್ಚಿಸಿ, ನಂತರ ನಿಮಗೆ ತಿಳಿಸುತ್ತೇನೆ. ರಾಹುಲ್‌ ಗಾಂಧಿ ಮುಂಬೈಗೆಶೀಘ್ರವೇ ಭೇಟಿ ನೀಡಲಿದ್ದಾರೆ’ ಎಂದು
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.