ADVERTISEMENT

ಐ.ಟಿ ದಾಳಿ: ರೆವಿನ್ಯೂ ಕಾರ್ಯದರ್ಶಿಗೆ ಚುನಾವಣಾ ಆಯೋಗ ಬುಲಾವ್

ಸಿಬಿಡಿಟಿ, ರೆವಿನ್ಯೂ ಇಲಾಖೆ ವಿರುದ್ಧ ಆಯೋಗ ಕೆಂಗಣ್ಣು

ಪಿಟಿಐ
Published 9 ಏಪ್ರಿಲ್ 2019, 20:15 IST
Last Updated 9 ಏಪ್ರಿಲ್ 2019, 20:15 IST
   

ನವದೆಹಲಿ: ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್‌ ಸೇರಿದಂತೆ ವಿರೋಧ ಪಕ್ಷದ ನಾಯಕರು ಮತ್ತು ಅವರ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ದಾಳಿಯ ಕುರಿತು ವಿವರ ನೀಡುವಂತೆ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮತ್ತು ರೆವಿನ್ಯೂ ಕಾರ್ಯದರ್ಶಿಗೆ ಚುನಾವಣಾ ಆಯೋಗ ಮಂಗಳವಾರ ಸೂಚಿಸಿದೆ.

ಚುನಾವಣೆ ಸಂದರ್ಭದಲ್ಲಿ ಬಿಜೆಪಿಯು ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ ಅಧಿಕಾರಿಗಳ ಮೂಲಕ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ಆರೋಪಿಸಿದ್ದವು. ಈ ಹಿನ್ನೆಲೆಯಲ್ಲಿ ರೆವಿನ್ಯೂಕಾರ್ಯದರ್ಶಿ ಎ.ಬಿ. ಪಾಂಡೆ ಮತ್ತು ಸಿಬಿಡಿಟಿ ಮುಖ್ಯಸ್ಥ ಪಿ.ಸಿ. ಮೂಡಿಯವರನ್ನು ಆಯೋಗವು ಈ ಸೂಚನೆ ನೀಡಿದೆ.

ಚುನಾವಣೆ ಸಂದರ್ಭದಲ್ಲಿ ಕೇಂದ್ರದ ಯಾವುದೇ ಸಂಸ್ಥೆ ಅಥವಾ ಇಲಾಖೆಯ ಕಾರ್ಯನಿರ್ವಹಣೆ ತಟಸ್ಥ ಮತ್ತು ಪಕ್ಷಪಾತರಹಿತವಾಗಿರಬೇಕು ಎಂದು ಚುನಾವಣಾ ಆಯೋಗವು ಭಾನುವಾರವಷ್ಟೇ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಕಠಿಣ ಎಚ್ಚರಿಕೆ ನೀಡಿತ್ತು.

ADVERTISEMENT

ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ರಾಜಕಾರಣಿಗಳು ಮತ್ತು ಅವರ ಆಪ್ತರ ಮನೆ ಮೇಲೆ ಭಾನುವಾರ ಐ.ಟಿ ದಾಳಿ ನಡೆದ ನಂತರ, ಆಯೋಗವು ಸರ್ಕಾರಕ್ಕೆ ಈ ಎಚ್ಚರಿಕೆ ನೀಡಿತ್ತು.

ಕಳೆದ ಮಾರ್ಚ್‌ 10ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ವಿರೋಧ ಪಕ್ಷಗಳ ರಾಜಕಾರಣಿಗಳು ಮತ್ತು ಅವರ ಆಪ್ತರ ಮನೆ ಮೇಲೆ ಹಲವು ಬಾರಿ ಐ.ಟಿ ದಾಳಿ ನಡೆದಿದೆ. ಹೀಗೆ, ಕೇಂದ್ರ ತನಿಖಾ ಸಂಸ್ಥೆಗಳನ್ನು ಕೇಂದ್ರಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ದೂರಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.