ADVERTISEMENT

ಐ.ಟಿ ನಿಯಮ ಪಾಲನೆ: ಸಚಿವ ಪ್ರಸಾದ್ ಶ್ಲಾಘನೆ

ಮೊದಲ ಅನು‍ಪಾಲನಾ ವರದಿ ಪ್ರಕಟಿಸಿದ ಗೂಗಲ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌

ಪಿಟಿಐ
Published 3 ಜುಲೈ 2021, 21:25 IST
Last Updated 3 ಜುಲೈ 2021, 21:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮೊದಲ ಅನುಪಾಲನಾ ವರದಿಯನ್ನು ಪ್ರಕಟಿಸುವ ಮೂಲಕ ಹೊಸ ಐ.ಟಿ. ನಿಯಮಗಳನ್ನು ಪಾಲಿಸಿದ ಗೂಗಲ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಶ್ಲಾಘಿಸಿದ್ದಾರೆ. ಇದು ಪಾರದರ್ಶಕತೆಯತ್ತ ದೊಡ್ಡ ಹೆಜ್ಜೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ಹೊಸ ಐಟಿ ನಿಯಮಗಳ ಪ್ರಕಾರ, ಅನುಚಿತ ಪೋಸ್ಟ್‌ಗಳನ್ನು ತಮ್ಮ ವೇದಿಕೆಗಳಿಂದ ಸ್ವಯಂಪ್ರೇರಣೆಯಿಂದ ತೆಗೆದುಹಾಕುವ ಬಗ್ಗೆ ಮೊದಲ ಅನುಪಾಲನಾ ವರದಿ ಪ್ರಕಟಿಸಿದ ಸಂಸ್ಥೆಗಳ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ.ಹೊಸ ಐ.ಟಿ ನಿಯಮಗಳ ಪ್ರಕಾರ, 50 ಲಕ್ಷಕ್ಕೂ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ದೊಡ್ಡ ಡಿಜಿಟಲ್ ವೇದಿಕೆಗಳುಪ್ರತಿ ತಿಂಗಳು ಅನುಪಾಲನಾ ವರದಿ ಪ್ರಕಟಿಸಬೇಕು. ಸ್ವೀಕರಿಸಿದ ದೂರುಗಳ ವಿವರ ಮತ್ತು ಅವುಗಳ ಆಧಾರದಲ್ಲಿ ತೆಗೆದುಕೊಂಡ ಕ್ರಮಗಳ ಮಾಹಿತಿಯನ್ನು ವರದಿಯಲ್ಲಿ ಉಲ್ಲೇಖಿಸಬೇಕಿದೆ.

ಹೊಸ ನಿಯಮಗಳ ಜಾರಿ ಪ್ರಶ್ನಿಸಿ ಟ್ವಿಟರ್ ಸಂಸ್ಥೆಯು ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದಿರುವ ಮಧ್ಯೆಯೇ ಉಳಿದ ಸಂಸ್ಥೆಗಳು ವರದಿ ಪ್ರಕಟಿಸಿವೆ. ದೂರು ಸ್ವೀಕಾರ ಅಧಿಕಾರಿ ನೇಮಕ ಸೇರಿದಂತೆ ಹೊಸ ನೀತಿಗಳನ್ನು ಪಾಲಿಸಲು ವಿಫಲವಾಗಿರುವ ಟ್ವಿಟರ್ ಸಂಸ್ಥೆಯು ಭಾರತದಲ್ಲಿ ತನಗಿದ್ದ ಸುರಕ್ಷತಾ ಸೌಲಭ್ಯವನ್ನು ಕಳೆದುಕೊಂಡಿದೆ.

ADVERTISEMENT

ಮೇ 15ರಿಂದ ಜೂನ್ 15ರ ಅವಧಿಯಲ್ಲಿ 10 ವಿಭಾಗಗಳಲ್ಲಿ 3 ಕೋಟಿಗೂ ಹೆಚ್ಚಿನ ’ಕಂಟೆಂಟ್‌’ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಫೇಸ್‌ಬುಕ್ ಶುಕ್ರವಾರ ತಿಳಿಸಿತ್ತು. ಈ ಮೂಲಕತನ್ನ ಮೊದಲ ಮಾಸಿಕ ಅನುಪಾಲನಾ ವರದಿ ಪ್ರಕಟಿಸಿ, ಐಟಿ ನಿಯಮಗಳನ್ನು ಪಾಲಿಸಿತ್ತು.ಇದೇ ಅವಧಿಯಲ್ಲಿ ಒಂಬತ್ತು ವಿಭಾಗಗಳಲ್ಲಿ ಸುಮಾರು 20 ಲಕ್ಷ ಕಂಟೆಂಟ್‌ಗಳ ವಿರುದ್ಧ ಕ್ರಮ ಕೈಗೊಂಡಿದ್ದಾಗಿ ಇನ್‌ಸ್ಟಾಗ್ರಾಮ್ ತಿಳಿಸಿತ್ತು.

ಆಕ್ಷೇಪಾರ್ಹ ಪೋಸ್ಟ್‌ಗಳು, ಫೋಟೋಗಳು, ವಿಡಿಯೊಗಳು ಅಥವಾ ಕಾಮೆಂಟ್‌ಗಳನ್ನು ಕಂಪನಿಗಳು ತಮ್ಮ ವೇದಿಕೆಯಿಂದ ತೆಗೆದುಹಾಕಿವೆ. ಕೆಲವು ಕಂಟೆಂಟ್‌ಗಳ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಿವೆ.

ಸ್ಥಳೀಯ ಕಾನೂನುಗಳು ಅಥವಾ ಹಕ್ಕುಗಳ ಉಲ್ಲಂಘನೆ ಆರೋಪದ ಮೇಲೆ ಭಾರತದ ಬಳಕೆದಾರರಿಂದ ಏಪ್ರಿಲ್‌ನಲ್ಲಿ 27,762 ದೂರುಗಳು ಬಂದಿವೆ ಎಂದು ಗೂಗಲ್ ಹೇಳಿದ್ದು, 59,350 ಕಂಟೆಂಟ್‌ಗಳನ್ನು ತೆಗೆದುಹಾಕಲಾಗಿದೆ.

ಜೂನ್‌ನಲ್ಲಿ 5,502 ಪೋಸ್ಟ್‌ಗಳ ಬಗ್ಗೆ ಬಳಕೆದಾರರು ವರದಿ ಮಾಡಿದ್ದು,54,235 ಕಂಟೆಂಟ್‌ಗಳನ್ನು ಸುಧಾರಿತ ರೂಪಕ್ಕೆ ಪರಿವರ್ತಿಸಲಾಗಿದೆ ಎಂದು ‌ಕೂ ಸಂಸ್ಥೆಯು ತನ್ನ ವರದಿಯಲ್ಲಿ ತಿಳಿಸಿದೆ.

ಸ್ಫೂರ್ತಿ ಪ್ರಿಯಾ ಅವರನ್ನು ಭಾರತದಲ್ಲಿ ತನ್ನ ಕುಂದುಕೊರತೆ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದುಫೇಸ್‌ಬುಕ್ ಇತ್ತೀಚೆಗೆ ಮಾಹಿತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.