ADVERTISEMENT

ಲಡಾಖ್: ಗಡಿಯಲ್ಲಿ ಗಸ್ತು ಹೆಚ್ಚಳ, ಐಟಿಬಿಪಿಯ 40 ಕಂಪನಿಗಳ ನಿಯೋಜನೆ

ಪಿಟಿಐ
Published 23 ಜೂನ್ 2020, 16:30 IST
Last Updated 23 ಜೂನ್ 2020, 16:30 IST
ಐಟಿಬಿಪಿಯ ಸ್ನೋಸ್ಕೂಟರ್‌ –ಪಿಟಿಐ ಚಿತ್ರ
ಐಟಿಬಿಪಿಯ ಸ್ನೋಸ್ಕೂಟರ್‌ –ಪಿಟಿಐ ಚಿತ್ರ   

ನವದೆಹಲಿ: ಲಡಾಖ್‌ನಲ್ಲಿನ ವಾಸ್ತವ ನಿಯಂತ್ರಣ ರೇಖೆಯಿಂದ (ಎಲ್‌ಎಸಿ) ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಭಾರತ–ಚೀನಾ ಒಪ್ಪಿಕೊಂಡಿವೆ. ಇದರ ಮಧ್ಯೆಯೇ, ಎಲ್‌ಎಸಿಯಲ್ಲಿ ಗಸ್ತು ಹೆಚ್ಚಿಸಲುಕೇಂದ್ರ ಸರ್ಕಾರವು ಕ್ರಮ ತೆಗೆದುಕೊಂಡಿದೆ.

ದೇಶದ ವಿವಿಧೆಡೆ ನಿಯೋಜನೆ ಮಾಡಲಾಗಿದ್ದಇಂಡೊ–ಟಿಬೆಟಿಯನ್ ಗಡಿ ಪೊಲೀಸ್ ಪಡೆಯ (ಐಟಿಬಿಪಿ) 40 ಕಂಪನಿಗಳನ್ನು, ಅಲ್ಲಿಂದ ವಾಪಸ್ ಕರೆಸಿಕೊಳ್ಳಲಾಗಿದೆ. ತಲಾ 100 ಸಿಬ್ಬಂದಿ ಇರುವ ಈ ಕಂಪನಿಗಳನ್ನು, ಲಡಾಖ್‌ ಮತ್ತು ಅರುಣಾಚಲ ಪ್ರದೇಶದಲ್ಲಿ ಇರುವಎಲ್‌ಎಸಿಗೆ ನಿಯೋಜನೆ ಮಾಡಲಾಗಿದೆ.

‘ಎಲ್‌ಎಸಿಯಲ್ಲಿ ಗಸ್ತಿನ ಪ್ರಮಾಣವನ್ನು ಹೆಚ್ಚಿಸುವಂತೆ ಮೇಲಿಂದ ಬಂದಿರುವ ನಿರ್ದೇಶನದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 20 ಕಂಪನಿಗಳನ್ನು ಎಲ್‌ಎಸಿಗೆ ನಿಯೋಜನೆ ಮಾಡಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

ಈ 40 ಕಂಪನಿಗಳಲ್ಲಿ ಇರುವ 4,000 ಸಿಬ್ಬಂದಿಯು ಗುಡ್ಡಗಾಡು ಕಾದಾಟದಲ್ಲಿ ಪರಿಣತಿ ಹೊಂದಿದ್ದಾರೆ. ಅತ್ಯಾಧುನಿಕ ಎಸ್‌ಯುವಿಗಳು, ಸ್ನೋಸ್ಕೂಟರ್‌ಗಳು, ಆಲ್‌ಟೆರೇನ್‌ ವೆಹಿಕಲ್‌ಗಳು (ಎಟಿವಿ) ಮತ್ತು ವಿಶಿಷ್ಟ ಸಾಮರ್ಥ್ಯದ ಟ್ರಕ್‌ಗಳನ್ನು ಈ ಕಂಪನಿಗಳು ಹೊಂದಿವೆ. ಹೀಗಾಗಿ ದಿನ ಪೂರ್ತಿ ಪರಿಣಾಮಕಾರಿಯಾಗಿ ಗಸ್ತು ನಡೆಸಲು ಸಾಧ್ಯವಾಗುತ್ತದೆ. ಈ ವಾಹನಗಳನ್ನು ಎಲ್‌ಎಸಿಗೆ ಸಾಗಿಸುವ ಕೆಲಸ ನಡೆಯುತ್ತಿದೆ.

ಎಲ್‌ಎಸಿಯಲ್ಲಿ ಎರಡು ರೀತಿಯಲ್ಲಿ ಗಸ್ತು ನಡೆಸಲು ಸಿದ್ಧತೆ ತಡೆಲಾಗಿದೆ. ಪ್ರತಿ ಕಂಪನಿಯ ಒಂದು ತಂಡವು ಕಡಿಮೆ ಅಂತರದಲ್ಲಿ ಗಸ್ತು ನಡೆಸಲಿದೆ. ಉಳಿದ ಕೆಲವು ಕಂಪನಿಗಳು ಹೆಚ್ಚು ಅಂತರದಲ್ಲಿ ಗಸ್ತು ನಡೆಸಲಿವೆ.ಐಟಿಬಿಪಿ ಪ್ರಧಾನ ನಿರ್ದೇಶಕ ಎಸ್.ಎಸ್.ದೆಸ್ವಾಲ್ ಅವರು ಎಲ್‌ಎಸಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಎಲ್ಲೆಲ್ಲಿ ಕಂಪನಿಗಳನ್ನು ನಿಯೋಜನೆ ಮಾಡಬೇಕು ಎಂಬುದರ ಬಗ್ಗೆ ಸೂಚನೆ ನೀಡಿದ್ದಾರೆ. ಲಡಾಖ್‌ನಲ್ಲಿ ಕಠಿಣ ವಾತಾವರಣ ಇರುವ ಕಾರಣ, ಯುವಕರು ಇರುವ ಕಂಪನಿಗಳನ್ನು ನಿಯೋಜನೆ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

‘ಐಟಿಬಿಪಿಯಲ್ಲಿ ಕಮಾಂಡರ್ ಹಂತದ ಹುದ್ದೆಗಳು ತೆರವಾಗಿವೆ. ಅವನ್ನು ಶೀಘ್ರವೇ ಭರ್ತಿ ಮಾಡಬೇಕು. ಇದಕ್ಕಾಗಿ ಕ್ರಮ ತೆಗೆದುಕೊಳ್ಳಿ’ ಎಂದು ಐಟಿಬಿಪಿಯು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ.

3,488 ಕಿ.ಮೀ. ಎಲ್‌ಎಸಿಯ ಉದ್ದ. ಲಡಾಖ್‌ನ ಕಾರಕೋರಂ ಪರ್ವತ ಶ್ರೇಣಿಯಿಂದ ಅರುಣಾಚಲ ಪ್ರದೇಶದ ಜಾಚೆಪ್‌ಲಾವರಗೆ ಇದೆ

180 ಗಡಿಠಾಣೆಗಳಿವೆ

50 ಮೂಲ ಶಿಬಿರಿಗಳಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.