ಬೆಂಗಳೂರು: ಭೂಮಿಯ ಮೇಲಿನ ಐದನೇ ಅತಿದೊಡ್ಡ ಪರ್ವತವಾಗಿರುವ ಮೌಂಟ್ ಮಾಕಾಲು ಪರ್ವತವನ್ನು (mount makalu) ಇಂಡೊ ಟಿಬೆಟಿಯನ್ ಗಡಿ ಭದ್ರತಾ ಪಡೆಯ (ಐಟಿಬಿಪಿ) ಪರ್ವತಾರೋಹಿ ತಂಡ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಏರಿದೆ.
ಐಟಿಬಿಪಿ ಯೋಧರು ಪರ್ವತದ ಶೃಂಗ ತಲುಪಿ ಭಾರತದ ಬಾವುಟ ಹಾಗೂ ಐಟಿಬಿಪಿಯ ಬಾವುಟವನ್ನು ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲದೇ ಪರ್ವತದಲ್ಲಿ ಬಿದ್ದಿದ್ದ ಸುಮಾರು 150 ಕೆ.ಜಿ ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಿದ್ದಾರೆ.
ಈ ವಿಚಾರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಐಟಿಬಿಪಿ ಯೋಧರನ್ನು ಅಭಿನಂದಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ‘ಅತ್ಯಂತ ಪ್ರತಿಕೂಲ ವಾತಾವರಣದಲ್ಲಿ ಮಾಕಾಲು ಪರ್ವತವನ್ನು ಏರಿ ಅಲ್ಲಿ ಬಿದ್ದಿದ್ದ 150 ಕೆ.ಜಿ ಪ್ಲಾಸ್ಟಿಕ್ ಕಸವನ್ನು ನಮ್ಮ ಯೋಧರು ಸಂಗ್ರಹಿಸಿ ಸ್ವಚ್ಛತೆ ಅಭಿಯಾನವನ್ನು ಸಾರಿದ್ದು ಹೆಮ್ಮೆ ಮೂಡಿಸುತ್ತದೆ‘ ಎಂದಿದ್ದಾರೆ.
ಇದೇ ವೇಳೆ ಐಟಿಬಿಪಿ ಪರ್ವತಾರೋಹಿ ತಂಡವನ್ನು ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿರುವ ಅಮಿತ್ ಶಾ ಅವರು, ತಂಡಕ್ಕೆ ನಗದು ಬಹುಮಾನವನ್ನೂ ಘೋಷಣೆ ಮಾಡಿ ಚೆಕ್ ಹಸ್ತಾಂತರಿಸಿದ್ದಾರೆ.
ನೇಪಾಳ–ಟಿಬೆಟ್ ಗಡಿಯಲ್ಲಿರುವ ಮೌಂಟ್ ಮಾಕಾಲು ಪರ್ವತ ಸಮುದ್ರ ಮಟ್ಟದಿಂದ 8,485 ಮೀಟರ್ ಎತ್ತರದಲ್ಲಿದೆ. ಈ ಪರ್ವತ ಮೌಂಟ್ ಎವರೆಸ್ಟ್ ಪರ್ವತದಿಂದ ಆಗ್ನೇಯ ಭಾಗಕ್ಕೆ ಸುಮಾರು 19 ಕಿ.ಮೀ ದೂರದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.