ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಉಗ್ರರ ಅಡಗುದಾಣವನ್ನು ಭೇದಿಸಿದ್ದು, ಉಗ್ರರು ಸಂಗ್ರಹಿಸಿಟ್ಟಿದ್ದ ಹಲವು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಲಾರ್‌ಮೋಹ್ ಅವಂತಿಪೋರಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳು ಉಗ್ರರ ಅಡಗುತಾಣವನ್ನು ಭೇದಿಸಿದ್ದಾರೆ. ಶೋಧದ ವೇಳೆ ಗ್ರೆನೇಡ್, ಯುಬಿಜಿಎಲ್, ಎಲೆಕ್ಟ್ರಿಕ್ ಡಿಟೋನೇಟರ್, ಪಿಸ್ತೂಲ್ ಮ್ಯಾಗಜೀನ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಪುಣೆ: ಶಂಕಿತ ಜಿಬಿಎಸ್ ಪ್ರಕರಣ 59ಕ್ಕೆ ಏರಿಕೆ
ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ಗಿಲಾನ್– ಬರ್ರೆ ಸಿಂಡ್ರೋಮ್‌ನ (ಜಿಬಿಎಸ್) ಶಂಕಿತ 59 ಪ್ರಕರಣಗಳು ಪತ್ತೆಯಾಗಿರುವ ಬೆನ್ನಲ್ಲೇ, ಪ್ರಕರಣಗಳ ದಿಢೀರ್ ಏರಿಕೆ ಕುರಿತು ತನಿಖೆ ನಡೆಸಲು ಆರೋಗ್ಯ ಇಲಾಖೆಯು ತಂಡವೊಂದನ್ನು ರಚಿಸಿದೆ.
38 ಪುರುಷರು ಹಾಗೂ 21 ಮಹಿಳೆಯರಲ್ಲಿ ಜಿಬಿಎಸ್ ಕಾಣಿಸಿಕೊಂಡಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 59ಕ್ಕೆ ಏರಿಕೆಯಾಗಿದೆ. ಈ ಪೈಕಿ 12 ಜನರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ರೋಗಿಗಳ ಮಾದರಿಯನ್ನು ಪರೀಕ್ಷೆಗಾಗಿ ಎನ್‌ಐವಿಗೆ ಕಳುಹಿಸಲಾಗಿದೆ.
ಪುಣೆ ನಗರ, ನೆರೆಯ ಅವಳಿ ನಗರಗಳಾದ ಪಿಂಪ್ರಿ – ಚಿಂಚವಾಡ ಹಾಗೂ ಕೆಲ ಗ್ರಾಮೀಣ ಪ್ರದೇಶಗಳ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಕುರಿತು ನಾಗರಿಕರು ಭಯಪಡುವ ಅಗತ್ಯವಿಲ್ಲ. ಬದಲಾಗಿ ಮುನ್ನೆಚ್ಚರಿಕೆಯನ್ನು ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವು ಸೂಚನೆ ನೀಡಿದೆ.
ಜಿಬಿಎಸ್, ಮಾನವನ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ನರಮಂಡಲ ವ್ಯವಸ್ಥೆ, ನರಗಳು ಮತ್ತು ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.
ರಾಮ್ ಗೋಪಾಲ್ ವರ್ಮಗೆ ಜೈಲು ಶಿಕ್ಷೆ
ಮುಂಬೈ (ಪಿಟಿಐ): ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ, ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿರುವ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರಂಟ್ ಜಾರಿಗೊಳಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ಅಂಧೇರಿಯ ಮ್ಯಾಜಿಸ್ಟ್ರೇಟ್(ಪ್ರಥಮ ದರ್ಜೆ) ವೈ.ಪಿ ಪೂಜಾರಿ ಅವರು, ಮೂರು ತಿಂಗಳ ಒಳಗಾಗಿ ದೂರುದಾರರಿಗೆ ₹3,72,219 ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ.
ವಿಚಾರಣೆ ವೇಳೆ ವರ್ಮ ಅವರು ಹಾಜರಿರದ ಕಾರಣ ಅವರ ವಿರುದ್ಧ ಜಾಮೀನುರಹಿತ ಬಂಧನದ ವಾರಂಟ್ ಜಾರಿಗೊಳಿಸಲಾಗಿದೆ.
ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಿ ವರ್ಮ ವಿರುದ್ಧ ಕಂಪನಿಯೊಂದು 2018ರಲ್ಲಿ ದೂರು ದಾಖಲಿಸಿತ್ತು.
ಮಣಿಪುರ | ಅಹಿತಕರ ಪೋಸ್ಟ್ ಹಾಕಿದರೆ ಕಠಿಣ ಕ್ರಮ: ಸಿ.ಎಂ.
ಇಂಫಾಲ: ‘ಕಾನೂನು ಉಲ್ಲಂಘನೆ ಮತ್ತು ಅನ್ಯರ ಖಾಸಗೀತನಕ್ಕೆ ಧಕ್ಕೆ ಆಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಮಣಿಪುರದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
‘ಈಶಾನ್ಯ ರಾಜ್ಯದಲ್ಲಿ 2023ರ ಮೇ ತಿಂಗಳಲ್ಲಿ ಜನಾಂಗೀಯ ಬಿಕ್ಕಟ್ಟು ಆರಂಭವಾದ ತರುವಾಯ ಬೃಹತ್ ಸಂಖ್ಯೆಯಲ್ಲಿ ಹೊಸ ಸಂಘಟನೆಗಳು ಹುಟ್ಟಿಕೊಂಡಿವೆ. ಇವುಗಳಲ್ಲಿ ಹೆಚ್ಚಿನವು ಸುಲಿಗೆ, ಹಲ್ಲೆ, ಒತ್ತೆ ಇರಿಸಿಕೊಳ್ಳುವ ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗಿವೆ’ ಎಂದು ಹೇಳಿದ್ದಾರೆ.
‘ರಾಜ್ಯದಲ್ಲಿ ಸಹಜ ಸ್ಥಿತಿ ಮೂಡುವ ಸೂಚನೆಗಳಿವೆ. ಪರಿಸ್ಥಿತಿ ತಿಳಿಯಾಗಲು ಮಾಧ್ಯಮ ಕೂಡ ಸಹಕರಿಸಬೇಕು ಎಂದು ಕೋರುತ್ತೇನೆ’ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾದ ಕೆಲ ಪೋಸ್ಟ್‌ಗಳು ಕೋಮುಸೌಹಾರ್ದ ವಿರೋಧಿ ಆಗಿವೆ. ಮಹಿಳೆಯರ ಖಾಸಗಿ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆಗೆ ಸೇರದವರು ನಡೆಸಿರುವ ಪೋಸ್ಟ್‌ಗಳೂ ಅಪ್‌ಲೋಡ್ ಆಗಿವೆ’ ಎಂದು ಉಲ್ಲೇಖಿಸಿದರು.
ಚುನಾಯಿತ ಪ್ರತಿನಿಧಿಗಳ ಮನೆಗಳಲ್ಲಿ ದಾಂದಲೆ, ಲೂಟಿ ಕೃತ್ಯದಲ್ಲಿ ತೊಡಗಿದ್ದ ಕೆಲವರ ವಿರುದ್ದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗುವುದು ಎಂದು ತಿಳಿಸಿದರು.
ರಶೀದ್ ಜಾಮೀನು ಅರ್ಜಿ: ಎನ್‌ಐಎ ಪ್ರತಿಕ್ರಿಯೆ ಕೇಳಿದ ಕೋರ್ಟ್
ನವದೆಹಲಿ: ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿರುವ ಆರೋಪದಡಿ ಬಂಧನದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಸಂಸದ ಎಂಜಿನಿಯರ್ ರಶೀದ್ ಅವರ ಜಾಮೀನು ಅರ್ಜಿಯ ಬಗ್ಗೆ ಪ್ರತಿಕ್ರಿಯಿಸುವಂತೆ ‘ಎನ್‌ಐಎ’ಗೆ ದೆಹಲಿ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.
ಅರ್ಜಿಯ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿರುವ ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅವರು, ‘ಮುಂದಿನ ವಿಚಾರಣೆಯ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ(ಎನ್‌ಐಎ) ಸೂಚಿಸಿದ್ದಾರೆ.
ಜಾಮೀನು ಅರ್ಜಿಯು ಹಲವು ಸಮಯದಿಂದ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇದ್ದು, ಅದರ ತ್ವರಿತ ವಿಚಾರಣೆಗೆ ಸೂಚಿಸಬೇಕು ಅಥವಾ ಹೈಕೋರ್ಟ್‌ನಲ್ಲೇ ವಿಚಾರಣೆ ನಡೆಸಬೇಕು ಎಂದು ರಶೀದ್ ಪರ ವಕೀಲರು ಮನವಿ ಮಾಡಿದ್ದರು.
ರಶೀದ್ ಸಂಸದರಾಗಿರುವುದರಿಂದ ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಜಿಲ್ಲಾ ನ್ಯಾಯಾಲಯವನ್ನು ಕೋರಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು, ರಶೀದ್ ಜಾಮೀನು ಅರ್ಜಿಯನ್ನು ಕಳೆದ ವರ್ಷ ಡಿ.4ರಂದು ವಜಾಗೊಳಿಸಿದ್ದರು.
ವಿಶೇಷ ಅರ್ಜಿಯನ್ನು ಮಾತ್ರ ವಿಚಾರಣೆ ನಡೆಸಬಹುದು, ಸಾಮಾನ್ಯ ಜಾಮೀನು ಅರ್ಜಿಯ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ವಿಚಾರಣಾ ನ್ಯಾಯಾಧೀಶರು ಹೇಳಿದ್ದರು.
ರಶೀದ್ ಅವರು ಬಾರಾಮುಲ್ಲಾ ಕ್ಷೇತ್ರದ ಸಂಸದರಾಗಿದ್ದು, ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ ಆರೋಪದಡಿ 2019ರಿಂದ ತಿಹಾರ ಜೈಲಿನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.