ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್‌ನಲ್ಲಿ ಬುಧವಾರ ಸಚಿವರು, ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಬಳಿಕ ಪ್ರವಾಸಿಗರ ಜೊತೆ ಚರ್ಚಿಸಿ ಸೆಲ್ಫಿಗೆ ಪೋಸ್ ನೀಡಿದರು
–ಪಿಟಿಐ ಚಿತ್ರ
ಗುಲ್‌ಮಾರ್ಗ್: ‘ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯು ಈಗಲೂ ಪ್ರಸ್ತುತವಾಗಿದೆ‘ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಹೇಳಿದ್ದಾರೆ.
ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣವಾದ ಇಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಪಹಲ್ಗಾಮ್ ಉಗ್ರರ ದಾಳಿ ಕೃತ್ಯದ ಹೊರತಾಗಿಯೂ ಈ ಬೇಡಿಕೆ ಪ್ರಸ್ತುತವಾಗಿದೆ. ಇತ್ತೀಚೆಗೆ ನಡೆದ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲೂ ಈ ಕುರಿತು ಗಮನಸೆಳೆದಿದ್ದೇನೆ’ ಎಂದು ತಿಳಿಸಿದರು.
‘ಪಹಲ್ಗಾಮ್ ಘಟನೆ ಬಳಿಕ ರಾಜ್ಯ ಸ್ಥಾನಮಾನ ಬೇಡಿಕೆಗೆ ಹಿನ್ನಡೆಯಾಗಿಲ್ಲ. ಆದರೆ, ಈ ಕುರಿತು ಚರ್ಚೆಗೆ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಬಳಸಲು ನಾನು ಸಿದ್ಧವಿಲ್ಲ. ಅದರರ್ಥ ಈ ಕುರಿತ ಚರ್ಚೆಯೇ ಸ್ಥಗಿತಗೊಂಡಿದೆ ಎಂಬುದಲ್ಲ. ಅದು ನಿರಂತರವಾಗಿ ನಡೆದಿದೆ’ ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಕಾಯಕಲ್ಪ ನೀಡುವ ಕುರಿತ ಪ್ರಶ್ನೆಗೆ, ‘ಈ ತಾಣಗಳಲ್ಲಿ ಸಕ್ರಿಯ ಚಟುವಟಿಕೆ ಹಾಗೂ ಪೂರಕವಾದ ಪ್ರಚಾರ ಅಗತ್ಯವಿದೆ. ಚಟುವಟಿಕೆ ಸಕ್ರಿಯಗೊಳಿಸಲು ಈ ತಾಣಗಳಿಗೆ ಶಾಲೆ–ಕಾಲೇಜು ವಿದ್ಯಾರ್ಥಿಗಳ ಪ್ರವಾಸ ಆಯೋಜಿಸಲು ಶಿಕ್ಷಣ ಸಚಿವರಿಗೆ ಸೂಚಿಸಲಾಗಿದೆ’ ಎಂದರು.
ಜಮ್ಮು ಮತ್ತು ಕಾಶ್ಮೀರವು ಪ್ರವಾಸೋದ್ಯಮಕ್ಕೆ ಸಿದ್ಧವಾಗಿದೆ ಎಂದು ಸಂದೇಶ ರವಾನಿಸಲು ಸಚಿವಾಲಯದ ಹೊರಗಡೆ, ವಿವಿಧ ಸ್ಥಳಗಳಲ್ಲಿ ಸಚಿವರು, ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ ಎಂದರು.
‘ಪಹಲ್ಗಾಮ್‌ನ ಉಗ್ರರ ದಾಳಿ ಕೃತ್ಯಕ್ಕೆ ಸ್ಥಳೀಯ ಕಾಶ್ಮೀರಿಗಳನ್ನು ಹೊಣೆ ಮಾಡಬಾರದು. ಆ ಕೃತ್ಯಕ್ಕಾಗಿ ಕಾಶ್ಮೀರಿಗಳನ್ನು ದಂಡಿಸುವ ಕೆಲಸವೂ ಆಗಬಾರದು. ಇದೇ ಕಾರಣದಿಂದ ಕೃತ್ಯದ ತನಿಖೆ ಚುರುಕುಗೊಳಿಸಲು ಕೇಂದ್ರ ಸರ್ಕಾರಕ್ಕೆ ಕೋರಿದ್ದೇವೆ’ ಎಂದು ಅವರು ತಿಳಿಸಿದರು.
ಪ್ರವಾಸಿಗರಲ್ಲಿ ಭರವಸೆ ಮೂಡಿಸುವ ಕ್ರಮವಾಗಿ ಹಾಗೂ ಪ್ರವಾಸಿಗಳನ್ನು ಸೆಳೆಯುವ ಮೊದಲು ಕಾಶ್ಮೀರಿಗಳು ವಿವಿಧ ತಾಣಗಳಿಗೆ ಭೇಟಿ ನೀಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶ್ರೀನಗರ: ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಇಲ್ಲಿನ ಪ್ರವಾಸಿ ತಾಣ ಗುಲ್‌ಮಾರ್ಗ್‌ನಲ್ಲಿ ಬುಧವಾರ ಸಂಪುಟ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಭೆಯನ್ನು ನಡೆಸಿದರು.
ಮಂಗಳವಾರವಷ್ಟೇ ಮುಖ್ಯಮಂತ್ರಿ ಇಂತಹುದೇ ಸಭೆಯನ್ನು ಇತ್ತೀಚೆಗೆ ಉಗ್ರರ ದಾಳಿ ಕೃತ್ಯ ನಡೆದಿದ್ದ ಪಹಲ್ಗಾಮ್‌ನಲ್ಲಿ ನಡೆಸಿದ್ದರು. ಕಾಶ್ಮೀರಕ್ಕೆ ಪ್ರವಾಸಿಗರನ್ನು ಸೆಳೆಯುವ ಕ್ರಮವಾಗಿ ರಾಜ್ಯದಲ್ಲಿ ಭದ್ರತೆ ಕುರಿತಂತೆ ಸಾರ್ವತ್ರಿಕವಾಗಿ ಇರುವ ಭೀತಿಯನ್ನು ನಿವಾರಿಸುವುದು ಸಚಿವಾಲಯದ ಹೊರತಾಗಿ ಬೇರೆ ಕಡೆ ಸಭೆಯನ್ನು ನಡೆಸುವುದರ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏ. 22ರ ಪಹಲ್ಗಾಮ್‌ನ ದಾಳಿ ಕೃತ್ಯದಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಆನಂತರ ಪ್ರವಾಸಿಗರಲ್ಲಿ ಭದ್ರತೆ ಕುರಿತು ಭೀತಿ ಆವರಿಸಿದ್ದು ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.