ADVERTISEMENT

ಚುನಾವಣೆ ಸಂದರ್ಭದಲ್ಲಿ 6,100 ಶಿಕ್ಷಕರ ನೇಮಕಾತಿ: ಜಗನ್ ಅವಸರಕ್ಕೆ TDP ಕಿಡಿ

ಪಿಟಿಐ
Published 7 ಫೆಬ್ರುವರಿ 2024, 11:32 IST
Last Updated 7 ಫೆಬ್ರುವರಿ 2024, 11:32 IST
ನಾರಾ ಲೋಕೇಶ್
ನಾರಾ ಲೋಕೇಶ್    

ಅಮರಾವತಿ: ತಮ್ಮ ಆಡಳಿತದ ಕೊನೆಯ 60 ದಿನಗಳು ಬಾಕಿ ಇರುವಾಗಲೇ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ ರೆಡ್ಡಿ ನೇತೃತ್ವದ ಸಚಿವ ಸಂಪುಟವು 6,100 ಶಿಕ್ಷಕರ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲು ಬುಧವಾರ ಸಮ್ಮತಿಸಿರುವುದನ್ನು ಟಿಡಿಪಿ ಖಂಡಿಸಿದೆ.

ಜಿಲ್ಲಾ ಆಯ್ಕೆ ಸಮಿತಿ (DSC)ಯು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಶಿಕ್ಷಕರ ನೇಮಕಾತಿ ಕೈಗೊಳ್ಳಲು ಸಂಪುಟ ಸಭೆ ನಿರ್ಧರಿಸಿದೆ.

ಸರ್ಕಾರದ ಈ ಕ್ರಮವನ್ನು ಬಲವಾಗಿ ವಿರೋಧಿಸಿರುವ ತೆಲಗು ದೇಶಂ ಪಕ್ಷದ ಮುಖಂಡ ನಾರಾ ಲೋಕೇಶ್, ‘ಜಗನ್ ಅವರನ್ನು ಜನರು ಎಂದಿಗೂ ನಂಬುವುದಿಲ್ಲ. 60 ತಿಂಗಳು ಅಧಿಕಾರ ನಡೆಸಿದರೂ, ಚುನಾವಣೆಗೆ 60 ದಿನಗಳು ಬಾಕಿ ಇರುವಾಗ ತರಾತುರಿಯಲ್ಲಿ ಪರೀಕ್ಷೆ ನಡೆಸಿ, ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವ ತಂತ್ರ ಹೂಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಜನರನ್ನು ವಂಚಿಸುತ್ತಿರುವ ವೈಎಸ್‌ಆರ್‌ಸಿಪಿ ನೇತೃತ್ವದ ರಾಜ್ಯ ಸರ್ಕಾರವನ್ನು ಜನರು ಕೂಡಲೇ ಅಧಿಕಾರದಿಂದ ಕಿತ್ತೊಗೆಯಲಿದ್ದಾರೆ. ರಾಜ್ಯದ ಯುವಜನತೆಗೆ ಸೂಕ್ತ ಕೆಲಸ ನೀಡಲು ಟಿಡಿಪಿ ಹಾಗೂ ಜನಸೇನಾ ಸಶಕ್ತವಾಗಿದೆ’ ಎಂದು ಲೋಕೇಶ್ ಹೇಳಿದ್ದಾರೆ. ಲೋಕೇಶ್ ಅವರು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಪುತ್ರ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.