ಜೈರಾಮ್ ರಮೇಶ್ ಮತ್ತು ಜಗದೀಪ್ ಧನಕರ್
ನವದೆಹಲಿ: ಉಪ ರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ರಾಜೀನಾಮೆ ನೀಡಿರುವುದು ಅಚ್ಚರಿಗೊಳಿಸಿದೆ ಎಂದು ಹೇಳಿರುವ ಕಾಂಗ್ರೆಸ್, ರಾಜೀನಾಮೆಗೆ ಆರೋಗ್ಯ ಸಮಸ್ಯೆಗಿಂತಲೂ ಬಲವಾದ ಕಾರಣ ಇರುವ ಸಾಧ್ಯತೆಯಿದೆ ಎಂದು ಅನುಮಾನಿಸಿದೆ.
ಸೋಮವಾರ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಧನಕರ್, ವೈದ್ಯಕೀಯ ಕಾರಣಗಳಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದರು.
ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, ‘ನಿನ್ನೆ(ಸೋಮವಾರ) ಮಧ್ಯಾಹ್ನ 1 ಗಂಟೆಯಿಂದ ಸಂಜೆ 4:30ರ ನಡುವೆ ಬಹಳ ಗಂಭೀರವಾದದ್ದೇನೋ ಸಂಭವಿಸಿದೆ’ ಎಂದಿದ್ದಾರೆ.
‘ಧನಕರ್ ಅವರು ಸೋಮವಾರ ಮಧ್ಯಾಹ್ನ 12:30ಕ್ಕೆ ಕಲಾಪ ಸಲಹಾ ಸಮಿತಿ(ಬಿಎಸಿ) ಸಭೆ ಕರೆದಿದ್ದರು. ಈ ಸಭೆಯಲ್ಲಿ ಜೆ.ಪಿ.ನಡ್ಡಾ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು. ಕೆಲವು ಚರ್ಚೆಗಳ ನಂತರ ಸಂಜೆ 4.30ಕ್ಕೆ ಮತ್ತೆ ಸಭೆ ಸೇರಲು ನಿರ್ಧರಿಸಲಾಯಿತು’
‘ಸಂಜೆ 4.30ಕ್ಕೆ ಧನಕರ್ ಅವರ ಅಧ್ಯಕ್ಷತೆಯಲ್ಲಿ ಬಿಎಸಿ ಮತ್ತೆ ಸಭೆ ಸೇರಿತು. ನಡ್ಡಾ ಮತ್ತು ರಿಜಿಜು ಸಭೆಗೆ ಬಾರದಿದ್ದರಿಂದ ಅವರ ಆಗಮನಕ್ಕಾಗಿ ಕಾದೆವು. ಆದರೆ, ಅವರು ಸಭೆಗೆ ಬರಲೇ ಇಲ್ಲ. ತಾವು ಗೈರಾಗುತ್ತೇವೆ ಎಂಬುದನ್ನು ಧನಕರ್ ಅವರಿಗೆ ವೈಯಕ್ತಿಕವಾಗಿ ತಿಳಿಸಿಯೂ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಧನಕರ್ ಅವರು ಇಂದು(ಮಂಗಳವಾರ) ಮಧ್ಯಾಹ್ನ 1 ಗಂಟೆಗೆ ಸಭೆ ನಡೆಸುವುದಾಗಿ ತಿಳಿಸಿದರು’ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
‘ನಿನ್ನೆ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4:30 ರ ನಡುವೆ ಬಹಳ ಗಂಭೀರವಾದದ್ದೇನೋ ಸಂಭವಿಸಿದೆ. ಇದೇ ಕಾರಣಕ್ಕೆ ಸಂಜೆ ನಡೆದ ಬಿಎಸಿ ಸಭೆಗೆ ನಡ್ಡಾ ಮತ್ತು ರಿಜಿಜು ಉದ್ದೇಶಪೂರ್ವಕವಾಗಿಯೇ ಗೈರಾಗಿದ್ದರು’ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
‘ಅಚ್ಚರಿ ಎಂಬಂತೆ ಧನಕರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಅವರು ಆರೋಗ್ಯದ ಕಾರಣಗಳನ್ನು ನೀಡಿದ್ದಾರೆ. ಅದನ್ನು ನಾವು ಗೌರವಿಸಬೇಕಿದೆ. ಆದರೆ, ಅವರ ರಾಜೀನಾಮೆಗೆ ಇದಕ್ಕಿಂತಲೂ ಬಲವಾದ ಕಾರಣಗಳಿವೆ ಎಂಬುವುದು ಸತ್ಯ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.