ADVERTISEMENT

ಸಿಎಎ ವಿಷಯದಲ್ಲೇಕೆ ಈ ಮೌನ?

ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಸಂವಿಧಾನ ತಜ್ಞರು, ಸಭಿಕರಿಂದ ನೇರ ಪ್ರಶ್ನೆ

ಪ್ರವೀಣ ಕುಲಕರ್ಣಿ
Published 25 ಜನವರಿ 2020, 19:55 IST
Last Updated 25 ಜನವರಿ 2020, 19:55 IST
   

ಜೈಪುರ: ‘ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಸಂವಿಧಾನ ಬಾಹಿರ ಎನ್ನುವುದು ಗೊತ್ತಿದ್ದರೂ ಸುಪ್ರೀಂ ಕೋರ್ಟ್‌ ಗಾಢವಾದ ಮೌನ ವಹಿಸಿ ಕುಳಿತಿರುವುದೇಕೆ’ ಎಂದು ಜೈಪುರ ಸಾಹಿತ್ಯ ಸಮ್ಮೇಳನ ಶನಿವಾರ ನೇರವಾಗಿ ಪ್ರಶ್ನೆ ಮಾಡಿತು.

‘ಪ್ರಜೆಗಳಿಂದ, ಪ್ರಜೆಗಳಿಗಾಗಿ: ಭಾರತೀಯ ಸಂವಿಧಾನ’ ಕುರಿತ ಗೋಷ್ಠಿಯಲ್ಲಿ ಭಾಗವಹಿಸಿದ ಸಂವಿಧಾನ ತಜ್ಞರು ಹಾಗೂ ಸಭಿಕರು ಒಕ್ಕೊರಲಿನಿಂದ ಈ ಪ್ರಶ್ನೆ ಹಾಕಿದರು. ‘ದೇಶದಲ್ಲಿ ನಡೆದಿರುವ ಬೆಳವಣಿಗೆಗಳ ವಿಷಯವಾಗಿ ಈಗಲಾದರೂ ಕೋರ್ಟ್‌ ಎಚ್ಚರಗೊಳ್ಳಬೇಕು’ ಎಂದೂ ಅವರು ಆಗ್ರಹಿಸಿದರು.

‘ಎಷ್ಟು ಜನ ಸಿಎಎ ವಿರುದ್ಧವಾಗಿದ್ದೀರಿ’ ಎಂದು ಗೋಷ್ಠಿ ನಡೆಸಿಕೊಟ್ಟ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಸೈಫ್‌ ಮಹಮೂದ್‌ ಪ್ರಶ್ನಿಸಿದಾಗ, ಸಭಾಂಗಣದಲ್ಲಿ ತುಂಬಿದ್ದ ಬಹುತೇಕ ಸಭಿಕರು ಕೈಎತ್ತಿ, ‘ವಿ ಡೋಂಟ್‌ ವಾಂಟ್‌ ಸಿಎಎ’ ಎಂದು ಕೂಗಿದರು.

ADVERTISEMENT

‘ಅತ್ಯಂತ ಸೂಕ್ಷ್ಮವಾದ ಈ ಕಾಲಘಟ್ಟದಲ್ಲಿ ನಡೆದಿರುವ ವಿದ್ಯಮಾನಗಳ ಕುರಿತು ಕೋರ್ಟ್‌ ಸ್ವಯಂಪ್ರೇರಣೆ ಯಿಂದ ವಿಚಾರಣೆಯನ್ನು ಕೈಗೆತ್ತಿ
ಕೊಳ್ಳಬೇಕಿತ್ತು. ಆದರೆ, ಸಿಎಎ ವಿರುದ್ಧ ಸಾವಿರಾರು ಅರ್ಜಿಗಳು ದಾಖಲಾದರೂ ಅದು ಮೌನ ವಹಿಸಿಕೊಂಡು ಕುಳಿತಿದೆ. ತನ್ನ ಹೊಣೆ ನಿಭಾಯಿಸುವಲ್ಲಿ ವಿಫಲವಾಗಿದೆ’ ಎಂದು ರಾಜ್ಯಪಾಲರಂತಹ ಸಾಂವಿಧಾನಿಕ ಹುದ್ದೆಯನ್ನೂ ನಿಭಾಯಿಸಿದ ಹಿರಿಯ ನಾಯಕಿ ಮಾರ್ಗರೆಟ್‌ ಆಳ್ವ ಅಸಮಾಧಾನ ವ್ಯಕ್ತಪಡಿಸಿದರು.

‘ಪೌರತ್ವ ನಿರೂಪಿಸಲು ಮತದಾರರ ಗುರುತಿನ ಚೀಟಿಯನ್ನು ಅರ್ಹ ದಾಖಲೆಯಾಗಿ ಪರಿಗಣಿಸುವು
ದಿಲ್ಲ ಎನ್ನುತ್ತಿದೆ ಸರ್ಕಾರ. ಹಾಗಾದರೆ ಇದುವರೆಗೆ ಗುರುತಿನ ಚೀಟಿ ಹೊಂದಿ, ಲೋಕಸಭೆಗೆ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದವರು ದೇಶದ ಹೊರಗಿನ ಪ್ರಜೆಗಳೇ’ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು.

‘ಅಧಿಕಾರಿಗಳು ಸಿಎಎಗಾಗಿ ಅರ್ಜಿ ತಂದರೆ ಅದನ್ನು ತುಂಬಬೇಡಿ. ಬಂಧನ ಗೃಹಕ್ಕೆ ಕಳುಹಿಸುತ್ತಾರೋ ಪೋರ್ಚುಗಲ್‌ಗೆ ದಬ್ಬುತ್ತಾರೋ ನೋಡೋಣ’ ಎಂದು ಆಳ್ವ ಸಲಹೆ ನೀಡಿದರು.

ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿದ್ದ ನವೀನ್‌ ಚಾವ್ಲಾ, ‘ಪೌರತ್ವವನ್ನು ನಿರೂಪಿಸಲು ಮತದಾರರ ಗುರುತಿನ ಚೀಟಿಗಿಂತ ಸೂಕ್ತ ದಾಖಲೆ ಬೇರೆ ಯಾವುದೂ ಇಲ್ಲ’ ಎಂದು ಪ್ರತಿಪಾದಿಸಿದರು.

ಸಂವಿಧಾನತಜ್ಞ ಮಾಧವ್ ಖೋಸ್ಲಾ, ‘ಪ್ರಜೆಗಳನ್ನು ಪ್ರತ್ಯೇಕಿಸಿ ನೋಡುವ ಈ ಕಾಯ್ದೆಯು ಸಂವಿಧಾನದ ಮೂಲ ಆಶಯಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ದೇಶದ ಜನ ಈ ಕಾಯ್ದೆಯನ್ನು ಒಪ್ಪಲು ಸಾಧ್ಯವೇ ಇಲ್ಲ’ ಎಂದು ಅಭಿಪ್ರಾಯಪಟ್ಟರು.

ಒಂದು ಹಂತದಲ್ಲಿ ಚಾವ್ಲಾ ಅವರು, ‘ಕೋರ್ಟ್‌ ಮೇಲೆ ನಂಬಿಕೆ ಕಳೆದುಕೊಳ್ಳಬೇಡಿ’ ಎಂದು ಸಮಾಧಾನ ಮಾಡಲು ಯತ್ನಿಸಿದರು. ಆಗ ವಿದ್ಯಾರ್ಥಿಯೊಬ್ಬ ಎದ್ದುನಿಂತು, ‘ಚುನಾವಣಾ ಆಯೋಗದ ಸ್ವಾಯತ್ತೆಗೆ ಧಕ್ಕೆ, ಸಂವಿಧಾನಬಾಹಿರ ಸಿಎಎ, ಎನ್‌ಆರ್‌ಸಿ ಅನುಷ್ಠಾನಕ್ಕೆ ಹವಣಿಕೆ, ಕಾಶ್ಮೀರದಲ್ಲಿ ಸ್ವಾತಂತ್ರ್ಯ ದಮನ, ಜೆಎನ್‌ಯು ದಾಳಿ ಎಷ್ಟು ವಿಷಯಗಳು ಬೇಕು ನಿಮಗೆ ಕೋರ್ಟ್‌ ಮೌನ ವಹಿಸಿ ಕುಳಿತಿರುವುದಕ್ಕೆ’ ಎಂದು ಪ್ರಶ್ನಿಸಿದ.

‘ನಾವು ಈ ದೇಶದ ಪ್ರಜೆಗಳು. ಅದನ್ನು ಯಾರಿಗೂ ನಿರೂಪಿಸಬೇಕಿಲ್ಲ. ಸರ್ಕಾರದ ನಿಲುವಿನ ವಿರುದ್ಧ ಒಕ್ಕೊರಲ ಧ್ವನಿ ಎತ್ತುವುದೊಂದೇ ನಮ್ಮ ಮುಂದಿರುವ ದಾರಿ’ ಎಂಬ ಸಂದೇಶದೊಂದಿಗೆ ಸಂವಾದಕರು ಚರ್ಚೆಗೆ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.