ADVERTISEMENT

ನುವಾಮ ವರದಿ | ದೇಶದ ಆರ್ಥಿಕತೆಗೆ ಬೂಸ್ಟರ್‌ ಡೋಸ್ ಬೇಕು: ಜೈರಾಮ್‌ ರಮೇಶ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 11:16 IST
Last Updated 18 ಜುಲೈ 2025, 11:16 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ: ದೇಶದ ಆರ್ಥಿಕತೆಗೆ ‘ದೊಡ್ಡ ಬೂಸ್ಟರ್‌ ಡೋಸ್‌’ನ ಅಗತ್ಯವಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಮಾಧ್ಯಮ ವಿಭಾಗ) ಜೈರಾಮ್‌ ರಮೇಶ್‌ ಅಭಿಪ್ರಾಯಪಟ್ಟಿದ್ದಾರೆ. 

ನುವಾಮ ಇನ್‌ಸ್ಟಿಟ್ಯೂಷನಲ್ ಈಕ್ವಿಟೀಸ್‌ ಸಂಸ್ಥೆ ಬುಧವಾರ ಬಿಡುಗಡೆ ಮಾಡಿದ್ದ ಸಂಶೋಧನಾ ವರದಿ ಉಲ್ಲೇಖಿಸಿ ಭಾರತದ ಇಂದಿನ ಆರ್ಥಿಕ ಸ್ಥಿತಿಯ ಬಗ್ಗೆ ವರದಿಯಲ್ಲಿ ಕಳವಳ ವ್ಯಕ್ತವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ವರದಿಯನ್ನು ಉಲ್ಲೇಖಿಸಿ ಪೋಸ್ಟ್‌ ಮಾಡಿದ್ದಾರೆ. 

ADVERTISEMENT

ಜಿಎಸ್‌ಟಿಯ ( ಸರಕು ಮತ್ತು ಸೇವಾ ತೆರಿಗೆ) ಅಮೂಲಾಗ್ರ ಸುಧಾರಣೆ, ತೆರಿಗೆ ಭಯೋತ್ಪಾದನೆ, ಮುಕ್ತ ವಾತಾವರಣ ಸೃಷ್ಟಿ ಮತ್ತು ಕೆಲ ವ್ಯಕ್ತಿಗಳ ಉದ್ಯಮಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸಿದಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಸಾಲ ಮತ್ತು ರಫ್ತು, ಜಿಎಸ್‌ಟಿ ಸಂಗ್ರಹದಂತಹ ಹಲವು ಪ್ರಮುಖ ಆವರ್ತನ ಸೂಚಕಗಳು ನಿಧಾನಗತಿಗೆ ತಲುಪಿವೆ ಅಥವಾ ಸ್ಥಗಿತಗೊಂಡಿವೆ. ರಿಯಲ್‌ ಎಸ್ಟೇಟ್, ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ (ಕಾರು ಇತ್ಯಾದಿ) ಮಾರಾಟ ಸೇರಿದಂತೆ ಖಾಸಗಿ ಬಳಕೆ ಪ್ರಮಾಣವೂ ನಿರೀಕ್ಷಿತ ವೇಗವನ್ನು ಪಡೆದುಕೊಳ್ಳುತ್ತಿಲ್ಲ ಎಂಬುದನ್ನು ವರದಿ ಎತ್ತಿ ತೋರಿಸಿದೆ ಎಂದು ಹೇಳಿದ್ದಾರೆ. 

‘ಕೃಷಿ ಬೆಳೆಗಳ ಬೆಲೆ ಕುಸಿಯುತ್ತಿದೆ. ಗ್ರಾಮೀಣ ಪ್ರದೇಶಕ್ಕೆ ಇದು ದೊಡ್ಡ ಹೊಡೆತ. ಕಾರ್ಪೊರೇಟ್ ಸಂಸ್ಥೆಗಳಲ್ಲಿ ಹಣದ ಹರಿವಿಲ್ಲ. ವೇತನ ಮತ್ತು ಬಂಡವಾಳ ವೆಚ್ಚವನ್ನು ಕಡಿತ ಮಾಡುತ್ತಿವೆ. ಈಗಾಗಿ ದೇಶದ ಆರ್ಥಿಕತೆಗೆ ಬೂಸ್ಟರ್‌ ಡೋಸ್‌ ಬೇಕು ಎನ್ನುವುದನ್ನು ತೋರಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.