ADVERTISEMENT

ಪರಿಸರ ಅನುಮತಿ: ಜೈರಾಮ್‌ ಸುಪ್ರೀಂ ಮೊರೆ

ಪಿಟಿಐ
Published 23 ಜನವರಿ 2026, 13:45 IST
Last Updated 23 ಜನವರಿ 2026, 13:45 IST
ಜೈರಾಮ್‌ ರಮೇಶ್
ಜೈರಾಮ್‌ ರಮೇಶ್   

ನವದೆಹಲಿ: ಪರಿಸರ ಅನುಮತಿ ಪಡೆಯದೆ ಆರಂಭಿಸಿದ ಯೋಜನೆಗಳಿಗೆ ಘಟನೋತ್ತರದಲ್ಲಿ ಪೂರ್ವಾನ್ವಯ ಆಗುವಂತೆ ಅನುಮತಿ ನೀಡುವ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವುದಾಗಿ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರು ಶುಕ್ರವಾರ ಹೇಳಿದ್ದಾರೆ.

ಅರಾವಳಿ ಪರ್ವತ ಶ್ರೇಣಿಯ ಮರು ವ್ಯಾಖ್ಯಾನಕ್ಕೆ ಸಂಬಂಧಿಸಿದ ತನ್ನ ಆದೇಶವನ್ನು ಮರುಪರಿಶೀಲಿಸುವ ಸುಪ್ರೀಂ ಕೋರ್ಟ್‌ನ ನಿರ್ಧಾರದಿಂದ ಪ್ರೇರಿತರಾಗಿ ಈ ಅರ್ಜಿ ಸಲ್ಲಿಸಿರುವುದಾಗಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

‘ಪರಿಸರ ನಿಯಮ ಉಲ್ಲಂಘಿಸಿರುವ ಯೋಜನೆಗಳಿಗೆ ಘಟನೋತ್ತವಾಗಿ ದಂಡ ವಿಧಿಸಿ, ಪೂರ್ವಾನ್ವಯ ಅನುಮತಿ ನೀಡುವ ವ್ಯವಸ್ಥೆಯು ಕಾನೂನು ಬಾಹಿರ ಮಾತ್ರವಲ್ಲದೇ, ಪರಿಸರ ಆರೋಗ್ಯಕ್ಕೂ ಹಾನಿಕರವಾಗಿದೆ. ಜತೆಗೆ ಆಡಳಿತದ ನಿಯಮಗಳನ್ನು ನಿರ್ಲಕ್ಷ್ಯಿಸುವ ಪ್ರವೃತ್ತಿಗೆ ಒತ್ತು ನೀಡುತ್ತದೆ. ಹೀಗಾಗಿ ಅರ್ಜಿ ಸಲ್ಲಿಸಿದ್ದೇನೆ’ ಎಂದು ಅವರು ತಿಳಿಸಿದ್ದಾರೆ. 

ADVERTISEMENT

ಪರಿಸರ ಮಾನದಂಡಗಳನ್ನು ಉಲ್ಲಂಘಿಸಿರುವ ಯೋಜನೆಗೆ ಪೂರ್ವಾನ್ವಯವಾಗುವಂತೆ ಅನುಮತಿ ನೀಡದಂತೆ ನಿರ್ಬಂಧ ವಿಧಿಸಿ ಈ ಹಿಂದೆ ನ್ಯಾಯಮೂರ್ತಿಗಳಾದ ಎ.ಎಸ್‌ ಓಕಾ,  ಉಜ್ವಲ್‌ ಭುಯಾನ್‌ ಅವರ ಪೀಠವು ಆದೇಶ ಹೊರಡಿಸಿತ್ತು. ಮೇ 16ರಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಹಾಗೂ ನ್ಯಾ. ಚಂದ್ರನ್‌ ಅವರ ಪೀಠವು ಈ ಆದೇಶವನ್ನು ಹಿಂಪಡೆದು, ವಿಚಾರವನ್ನು ಮರು ಪರಿಶೀಲನೆಗೆ ಒಳಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.