ADVERTISEMENT

ಗಡಿಯಲ್ಲಿ ಶಾಂತಿ: ಚೀನಾ –ಭಾರತ ದ್ವಿಪಕ್ಷೀಯ ಚರ್ಚೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 5:09 IST
Last Updated 3 ಮಾರ್ಚ್ 2023, 5:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ದ್ವಿಪಕ್ಷೀಯ ಸಂಬಂಧದಲ್ಲಿ ಪ್ರಸ್ತುತದ ಸವಾಲುಗಳನ್ನು ಎದುರಿಸಲು, ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲು ಹೆಚ್ಚು ಗಮನ ಕೇಂದ್ರೀಕರಿಸಿ ಚೀನಾ ವಿದೇಶಾಂಗ ಸಚಿವ ಕಿನ್‌ ಗ್ಯಾಂಗ್‌ ಅವರ ಜತೆ ಮಾತುಕತೆ ನಡೆಸಲಾಯಿತು ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಗುರುವಾರ ಹೇಳಿದರು.

ಪೂರ್ವ ಲಡಾಖ್‌ನಲ್ಲಿ ಗಡಿ ಸಂಘರ್ಷ ಉದ್ಭವಿಸಿ 34 ತಿಂಗಳಾದ ನಂತರ ಜಿ20 ಸಮಾವೇಶದ ವೇಳೆ ನಡೆದಿರುವ ಪ್ರಮುಖ ದ್ವಿಪಕ್ಷೀಯ ಸಭೆ ಇದಾಗಿದೆ. ಉಭಯ ನಾಯಕರು ಕಳೆದ ಡಿಸೆಂಬರ್‌ನಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಚೀನಾ ಮತ್ತು ಭಾರತದ ನಡುವೆ ಉಂಟಾಗಿರುವ ಅಸಹಜವಾದ ಸಂಬಂಧಗಳ ಬಗ್ಗೆ ಕೇಂದ್ರಿತವಾಗಿದ್ದ ಮಾತುಕತೆಯಲ್ಲಿ ಜೈಶಂಕರ್‌, ‘ಗಡಿ ಪ್ರದೇಶಗಳಲ್ಲಿ ಶಾಂತಿ ಇಲ್ಲದಿದ್ದರೆ ಚೀನಾದೊಂದಿಗಿನ ಸಂಬಂಧಗಳು ಸಾಮಾನ್ಯವಾಗಲು ಸಾಧ್ಯವಿಲ್ಲವೆಂದು ಭಾರತ ಭಾವಿಸಿದೆ’ ಎಂದು ಹೇಳಿದ್ದಾರೆ.

ADVERTISEMENT

ಮಾತುಕತೆಗೂ ಮೊದಲು ಜೈಶಂಕರ್‌, ‘ಜಿ20 ವಿದೇಶಾಂಗ ಸಚಿವರ ಸಭೆಯ ಜತೆಗೆ ಚೀನಾ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಅವರೊಂದಿಗೂ ಪ್ರತ್ಯೇಕ ದ್ವಿಪಕ್ಷೀಯ ಸಭೆ ನಡೆಸಲಾಗುವುದು. ನಮ್ಮ ಮಾತುಕತೆ ದ್ವಿಪಕ್ಷೀಯ ಸಂಬಂಧಕ್ಕೆ ಎದುರಾಗಿರುವ ಪ್ರಸ್ತುತ ಸವಾಲುಗಳನ್ನು ಎದುರಿಸಲು ಕೇಂದ್ರೀಕರಿಸಿದೆ. ವಿಶೇಷವಾಗಿ ಗಡಿ ಪ್ರದೇಶಗಳಲ್ಲಿನ ಶಾಂತಿ ಮತ್ತು ನೆಮ್ಮದಿಯನ್ನು ಕೇಂದ್ರೀಕರಿಸಿದೆ’ ಎಂದು ಟ್ವೀಟ್‌ ಮಾಡಿದ್ದರು.

**

ಜಾಗತಿಕ ಕಾರ್ಯಸೂಚಿಯ ಪ್ರಮುಖ ವಿಷಯಗಳಲ್ಲಿ ಭಾರತ ತಳೆದ ಹೆಚ್ಚು ಜವಾಬ್ದಾರಿಯುತ ನಿಲುವು ಪ್ರಶಂಸನೀಯ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆ ಅಗತ್ಯವಿದ್ದು, ದೊಡ್ಡ ಅಧಿಕಾರಕ್ಕೆ ಭಾರತ ಹೆಚ್ಚು ಅರ್ಹವಿದೆ

– ಸೆರ್ಗಿ ಲಾವ್ರೊವ್‌, ರಷ್ಯಾ ವಿದೇಶಾಂಗ ಸಚಿವ

**

ಉಕ್ರೇನ್ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು, ಶಾಂತಿ ಸ್ಥಾಪನೆಯ ಪ್ರಕ್ರಿಯೆಗೆ ಕೊಡುಗೆ ನೀಡಲು ಭಾರತ ಸಂಪೂರ್ಣ ಸಿದ್ಧವಾಗಿದೆ

ನರೇಂದ್ರ ಮೋದಿ, ಭಾರತದ ಪ್ರಧಾನಿ

**

ಜಿ20 ಅಧ್ಯಕ್ಷತೆ ವಹಿಸಿರುವ ಭಾರತವು ಉಕ್ರೇನ್‌ನಲ್ಲಿ ಯುದ್ಧ ನಿಲ್ಲಿಸುವ ಹಾದಿ ಸುಗಮಗೊಳಿಸಲು ಮತ್ತು ಶಾಂತಿ ಸ್ಥಾಪಿಸುವ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು

ಜಾರ್ಜಿಯಾ ಮೆಲೊನಿ, ಇಟಲಿ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.