ADVERTISEMENT

ಜಾಮಾ ಮಸೀದಿ ಮತ್ತೆ ಮುಚ್ಚಬೇಕಾಗಬಹುದು: ಶಾಹಿ ಇಮಾಮ್

ಪಿಟಿಐ
Published 10 ಜೂನ್ 2020, 8:50 IST
Last Updated 10 ಜೂನ್ 2020, 8:50 IST
ದೆಹಲಿಯ ಜಾಮಾ ಮಸೀದಿ
ದೆಹಲಿಯ ಜಾಮಾ ಮಸೀದಿ   

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕೋವಿಡ್‌–19 ಪಿಡುಗು ಹದಗೆಡುತ್ತಿರುವುದದನ್ನು ಗಮನದಲ್ಲಿಟ್ಟುಕೊಂಡು, ಐತಿಹಾಸಿಕ ಜಾಮಾ ಮಸೀದಿಯನ್ನು ಮತ್ತೆ ಮುಚ್ಚಬೇಕಾಗಬಹುದು ಎಂದು ಮಸೀದಿಯ ಶಾಹಿ ಇಮಾಮ್‌ ಸೈಯದ್‌ ಅಹ್ಮದ್‌ ಬುಖಾರಿ ಬುಧವಾರ ಹೇಳಿದ್ದಾರೆ.

ಕೊರೊನಾ ವೈರಸ್‌ ಸೋಂಕಿನಿಂದ ಶಾಹಿ ಇಮಾಮ್‌ ಅವರ ಕಾರ್ಯದರ್ಶಿ ಅಮಾನುಲ್ಲಾ ಅವರು ಮಂಗಳವಾರ ರಾತ್ರಿ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಬೆಳವಣಿಗೆಯಿಂದ ಈ ಕುರಿತ ಚರ್ಚೆ ಆರಂಭವಾಗಿದೆ.

ದೆಹಲಿಯಲ್ಲಿ ಮಂಗಳವಾರ ಹೊಸದಾಗಿ 1,366 ಸೋಂಕು ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 31,309ಕ್ಕೆ ತಲುಪಿದಂತಾಗಿದೆ. ಸಾವಿನ ಸಂಖ್ಯೆ 905ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಜಾಮಾ ಮಸೀದಿಯನ್ನು ಮತ್ತೆ ಮುಚ್ಚುವ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಕೋರಲಾಗಿದೆ. ಜನರು ಸಾಮಾಜಿಕ ಜಾಲತಾಣಗಳು ಹಾಗೂ ಟಿ.ವಿ ವಾಹಿನಿಗಳ ಮೂಲಕ ಅಭಿಪ್ರಾಯ ತಿಳಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

‘ನಾವು ಮಸೀದಿಯನ್ನು ಮತ್ತೆ ಮುಚ್ಚಬಹುದು ಅಥವಾ ಸೀಮಿತ ಜನರಿಗೆ ನಮಾಜ್ ಮಾಡಲು ಕೆಲ ದಿನಗಳ ಮಟ್ಟಿಗೆ ಅವಕಾಶ ನೀಡಬಹುದು’ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ಕೋವಿಡ್‌ ನಿಯಂತ್ರಣಕ್ಕೆ ತರುವ ಸಲುವಾಗಿ ಹೇರಲಾಗಿದ್ದ ಲಾಕ್‌ಡೌನ್‌ ಅನ್ನು ಹಂತ ಹಂತವಾಗಿ ತೆರವುಗೊಳಿಸುತ್ತಿರುವ ಸರ್ಕಾರ, ಜೂನ್‌ 8ರಿಂದ ಮಸೀದಿಗಳನ್ನು ತೆರೆಯಲು ಅವಕಾಶ ನೀಡಿತ್ತು.

‘ದೆಹಲಿಯಲ್ಲಿ ಕೊರೊನಾ ವೈರಸ್‌ ಹರಡುವಿಕೆಯು ಉತ್ತುಂಗಕ್ಕೇರಿರುವ ಈ ಸಮಯದಲ್ಲಿ ಮಸೀದಿಗಳಿಗೆ ಭೇಟಿ ನೀಡುವುದರ ಅರ್ಥವೇನು? ಮನೆಯಲ್ಲಿಯೇ ಪ್ರಾರ್ಥನೆ ಮಾಡಬಹುದಲ್ಲವೇ? ಲಾಕ್‌ಡೌನ್ ಕಾರಣ ರಂಜಾನ್ ಮತ್ತು ಈದ್ ಸಮಯದಲ್ಲಿ ನಾವು ಹಾಗೆ ಮಾಡಿದ್ದೇವಲ್ಲವೇ’ ಎಂದು ಬುಖಾರಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.