ADVERTISEMENT

ಜಮ್ಮು–ಕಾಶ್ಮೀರ: 24ಕ್ಕೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷಗಳ ಸಭೆ

ಪಿಟಿಐ
Published 19 ಜೂನ್ 2021, 5:05 IST
Last Updated 19 ಜೂನ್ 2021, 5:05 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 24ರಂದು ಸಭೆ ನಡೆಸಲಿದ್ದಾರೆ.

ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ನಡೆಸುವುದೂ ಸೇರಿದಂತೆ ರಾಜಕೀಯ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರದ ಇತರ ಕೆಲವು ನಾಯಕರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿಯಲ್ಲಿ ನಡೆಯಲಿರುವ ದುಂಡು ಮೇಜಿನ ಸಭೆಗೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಎಲ್ಲ ರಾಜಕೀಯ ಮುಖಂಡರನ್ನು ಆಹ್ವಾನಿಸಲಾಗುತ್ತದೆ ಎನ್ನಲಾಗಿದೆ.

ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಜೆಕೆಎಪಿ ಪಕ್ಷದ ಅಲ್ತಾಫ್ ಬುಕಾರಿ ಮತ್ತು ಪೀಪಲ್ಸ್ ಕಾನ್ಫರೆನ್ಸ್‌ನ ಸಜ್ಜದ್ ಲೋನ್ ಅವರಿಗೆ ಸಭೆಗೆ ಆಹ್ವಾನ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಹ್ವಾನ ದೊರೆತಿದೆ: ಮುಫ್ತಿ

ಜೂನ್ 24ರ ಸಭೆಗೆ ಆಹ್ವಾನ ದೊರೆತಿದೆ ಎಂದು ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ. ಸಭೆಯಲ್ಲಿ ಭಾಗವಹಿಸುವ ಕುರಿತು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ. ಪಕ್ಷದ ಸದಸ್ಯರ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಜಮ್ಮು–ಕಾಶ್ಮೀರದ ರಾಜಕೀಯ ಪಕ್ಷಗಳ ಜತೆ ಕೇಂದ್ರ ಸರ್ಕಾರ ನಡೆಸುತ್ತಿರುವ ಮೊದಲ ಸಭೆ ಇದಾಗಿದೆ.

ಆದರೆ, ಮಾತುಕತೆಗೆ ಅಧಿಕೃತ ಆಹ್ವಾನ ಈವರೆಗೆ ಬಂದಿಲ್ಲ ಎಂದು ಪಿಎಜಿಡಿ ಮಿತ್ರಪಕ್ಷವಾದ ಸಿಪಿಐ(ಎಂ) ನಾಯಕ ಮೊಹಮ್ಮದ್ ಯೂಸುಫ್ ತಾರಿಗಾಮಿ ತಿಳಿಸಿದ್ದಾರೆ.

ಪಿಎಜಿಡಿಯು ಎನ್‌ಸಿ, ಪಿಡಿಪಿ, ಸಿಪಿಎಂ, ಪೀಪಲ್ಸ್ ಮೂವ್‌ಮೆಂಟ್ ಮತ್ತು ಅವಾಮಿ ನ್ಯಾಷನಲ್‌ ಕಾನ್ಫರೆನ್ಸ್ ಪಕ್ಷಗಳ ಮೈತ್ರಿಯಾಗಿದೆ. 2019ರ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರ ರದ್ದುಪಡಿಸಿದ್ದ ವಿಶೇಷ ಸ್ಥಾನಮಾನದ ಮರು ಸ್ಥಾಪನೆಗಾಗಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ಮೈತ್ರಿ ಸ್ಥಾಪನೆಯಾಗಿದೆ.

ಕಳೆದ ವಾರವಷ್ಟೇ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅಧ್ಯಕ್ಷತೆಯಲ್ಲಿ ಪಿಎಜಿಡಿ ಮೈತ್ರಿಕೂಟದ ಸಭೆ ನಡೆದಿತ್ತು (ಅಬ್ದುಲ್ಲಾ ಅವರು ಮೈತ್ರಿಕೂಟದ ಅಧ್ಯಕ್ಷರೂ ಆಗಿದ್ದಾರೆ). ಸಭೆಯ ಬಳಿಕ ಮಾತನಾಡಿದ್ದ ಫಾರೂಕ್ ಅಬ್ದುಲ್ಲಾ, ಕೇಂದ್ರದ ಜತೆ ಮಾತುಕತೆಗೆ ಸಿದ್ಧರಾಗಿರುವ ಬಗ್ಗೆ ಸುಳಿವು ನೀಡಿದ್ದರು.

ಜಮ್ಮು–ಕಾಶ್ಮೀರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಪ್ರಗತಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶುಕ್ರವಾರ ಪರಿಶೀಲನೆ ನಡೆಸಿದ್ದರು. ಈ ಸಭೆಯಲ್ಲಿ ಅವರು ‘ಕೇಂದ್ರ ಸರ್ಕಾರವು ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ವೇಳೆ ಪಾರದರ್ಶಕತೆಗೆ ಒತ್ತು ನೀಡುತ್ತದೆ’ ಎಂದು ಹೇಳಿದ್ದರು. ಆ ಮೂಲಕ ಅವರು ಕಣಿವೆಯ ಎಲ್ಲ ಪಕ್ಷಗಳ ಮುಖಂಡರ ಸಭೆಗೆ ಕೇಂದ್ರವು ವೇದಿಕೆ ಸಿದ್ಧಗೊಳಿಸಿದೆ ಎಂಬ ಸಂದೇಶ ರವಾನಿಸಿದ್ದರು ಎಂದೂ ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.