ADVERTISEMENT

ಸರ್ಕಾರಿ ನಿವಾಸ ತೊರೆಯುವಂತೆ ಮೆಹಬೂಬಾ ಮುಫ್ತಿಗೆ ಜಮ್ಮು & ಕಾಶ್ಮೀರ ಸರ್ಕಾರ ಸೂಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2022, 9:33 IST
Last Updated 21 ಅಕ್ಟೋಬರ್ 2022, 9:33 IST
ಮೆಹಬೂಬಾ ಮುಫ್ತಿ (ಪಿಟಿಐ ಚಿತ್ರ)
ಮೆಹಬೂಬಾ ಮುಫ್ತಿ (ಪಿಟಿಐ ಚಿತ್ರ)   

ಶ್ರೀನಗರ: ಭಾರೀ ಭದ್ರತೆ ಇರುವ ಗುಪ್ಕಾರ್‌ ಪ್ರದೇಶದಲ್ಲಿರುವ ಸರ್ಕಾರಿ ಬಂಗಲೆಯನ್ನು ತೊರೆಯುವಂತೆಪೀಪಲ್‌ ಡೆಮಾಕ್ರಟಿಕ್‌ ಪಾರ್ಟಿ(ಪಿಡಿಪಿ) ಮುಖ್ಯಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೆಜಮ್ಮು ಮತ್ತು ಕಾಶ್ಮೀರದ ಎಸ್ಟೇಟ್‌ ಇಲಾಖೆಯು ನೋಟಿಸ್‌ ನೀಡಿದೆ.

ಅವರು ಉಳಿದುಕೊಂಡಿರುವಫೇರ್‌ವ್ಯೂ ನಿವಾಸಕ್ಕೆ ಬದಲಾಗಿ ಪರ್ಯಾಯ ವಸತಿ ಸೌಲಭ್ಯ ಒದಗಿಸಿಕೊಡುವುದಾಗಿ ಇಲಾಖೆ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ಜಮ್ಮು ಮತ್ತು ಕಾಶ್ಮೀರದ ಎಲ್ಲ ಮಾಜಿ ಮುಖ್ಯಮಂತ್ರಿಗಳಿಗೆ ಶಾಶ್ವತ ವಸತಿ ಸೌಕರ್ಯ ಒದಗಿಸಲಾಗುತ್ತಿತ್ತು. ಆದರೆ, ಭಾರತ ಸರ್ಕಾರವು ರಾಜ್ಯದ ಕಾನೂನಿಗೆ ತಿದ್ದುಪಡಿ ತಂಡ ಬಳಿಕ, ಸೌಲಭ್ಯ ಕಡಿತಗೊಳಿಸಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಒಮರ್‌ ಅಬ್ದುಲ್ಲಾ ಮತ್ತು ಗುಲಾಂ ನಬಿ ಅಜಾದ್‌ ಅವರು 2020ರಲ್ಲೇ ಅಧಿಕೃತ ನಿವಾಸವನ್ನು ತೊರೆದಿದ್ದಾರೆ.

ADVERTISEMENT

ಆದಾಗ್ಯೂ, ಮುಫ್ತಿ ಅವರು ಗುಪ್ಕಾರ್‌ ರಸ್ತೆಯಲ್ಲಿರುವ ಐಷಾರಾಮಿ ನಿವಾಸದಲ್ಲಿಯೇ ಉಳಿದುಕೊಂಡಿದ್ದಾರೆ. ಹೆಚ್ಚಿನ ರಾಜಕಾರಣಿಗಳು, ಉನ್ನತಾಧಿಕಾರಿಗಳು ಈ ಪ್ರದೇಶದಲ್ಲಿಯೇ ಹೆಚ್ಚಾಗಿ ವಾಸವಿದ್ದಾರೆ.

ತಮಗೆ ನೋಟಿಸ್‌ ಬಂದಿರುವ ವಿಚಾರವನ್ನು ಮುಫ್ತಿ ಖಚಿತಪಡಿಸಿದ್ದಾರೆ. ಮೆಹಬೂಬಾ ಅವರ ತಂದೆ ಮುಫ್ತಿ ಮುಹಮ್ಮದ್‌ ಸಯೀದ್‌ ಅವರು 2002ರಿಂದ 2005ರವರೆಗೆಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು. ಆಗಿನಿಂದಲೂ ಮುಫ್ತಿ ಕುಟುಂಬ ಈ ನಿವಾಸದಲ್ಲಿ ವಾಸವಾಗಿದೆ.

ನೋಟಿಸ್‌ ಕುರಿತು ಪ್ರತಿಕ್ರಿಯಿಸಿರುವಮೆಹಬೂಬಾ ಮುಫ್ತಿ, 'ನಾನು ಸ್ವಂತ ನಿವಾಸವನ್ನು ಹೊಂದಿಲ್ಲ. ಬೇರೆ ಎಲ್ಲಿ ಉಳಿಯಲಿ. ಹಾಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕಾನೂನು ತಂಡದ ಸಲಹೆ ಪಡೆಯುತ್ತೇನೆ' ಎಂದು ತಿಳಿಸಿದ್ದಾರೆ.

ಮುಫ್ತಿ ನೇತೃತ್ವದ ಪಿಡಿಪಿ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕಣಿವೆಯಲ್ಲಿ ಮಾರ್ಚ್‌ 2015ರಿಂದ 2018ರ ಜೂನ್‌ ವರೆಗೆ ಅಧಿಕಾರದಲ್ಲಿತ್ತು.

ದೇಶದ ಇತರ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಅಧಿಕಾರಾವಧಿ ಮುಗಿದ ಬಳಿಕ ಅಧಿಕೃತ ನಿವಾಸವನ್ನು ತೊರೆಯುತ್ತಾರೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯ ಕಾರಣದಿಂದ, ಸರ್ಕಾರಿ ನಿವಾಸದಲ್ಲಿಯೇ ಉಳಿದುಕೊಳ್ಳುವ ಅವಕಾಶವಿತ್ತು. ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ಬಳಿಕ, ಮುಖ್ಯಮಂತ್ರಿಗಳಿಗೆ ಶಾಶ್ವತ ಸೌಲಭ್ಯ ಕಲ್ಪಿಸಿದ್ದ ಕಾನೂನನ್ನೂ ರದ್ದುಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.