ADVERTISEMENT

ಕಾಶ್ಮೀರಿ ಪಂಡಿತರು ದೇಶದಲ್ಲೇ ನಿರಾಶ್ರಿತರಾಗಿದ್ದಾರೆ: ಕೇಂದ್ರದ ವಿರುದ್ಧ ರಾಹುಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2022, 13:08 IST
Last Updated 27 ಅಕ್ಟೋಬರ್ 2022, 13:08 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಕಾಶ್ಮೀರಿ ಪಂಡಿತರ ಸರಣಿ ಹತ್ಯೆಗಳ ವಿಚಾರ ಪ್ರಸ್ತಾ‍ಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಈ ವರ್ಷ ಕಾಶ್ಮೀರದಲ್ಲಿ 30 ಉದ್ದೇಶಿತ ಹತ್ಯೆಗಳು ನಡೆದಿವೆ. ಪಂಡಿತರ ವಲಸೆ ವೇಗವಾಗಿ ಹೆಚ್ಚುತ್ತಿದೆ. ಯುಪಿಎ ಅವಧಿಯಲ್ಲಿಮಾಡಿದ ಒಳ್ಳೆಯ ಕೆಲಸವನ್ನು ಬಿಜೆಪಿ ಹಾಳು ಮಾಡಿದೆ’ ಎಂದು ರಾ‌ಹುಲ್ ಟ್ವೀಟ್ ಮಾಡಿದ್ದಾರೆ.

‘ಅಧಿಕಾರಕ್ಕೆ ಬರುವ ಮುನ್ನ ದೊಡ್ಡ ದೊಡ್ಡ ಮಾತುಗಳನ್ನಾಡಿದ ಪ್ರಧಾನಿ ಮೋದಿಯವರು ಅಧಿಕಾರ ಅನುಭವಿಸುತ್ತಿದ್ದಾರೆ. ಆದರೆ, ಕಾಶ್ಮೀರಿ ಪಂಡಿತರು ತಮ್ಮದೇ ದೇಶದಲ್ಲೇನಿರಾಶ್ರಿತರಾಗಿ ಉಳಿದಿದ್ದಾರೆ’ ಎಂದು ರಾಹುಲ್‌ ಕಿಡಿಕಾರಿದ್ದಾರೆ.

ADVERTISEMENT

ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಚೌಧರಿಗುಂಡ್‌ ಗ್ರಾಮದ 10 ಕಾಶ್ಮೀರಿ ಕುಟುಂಬಗಳು ಹುಟ್ಟೂರು ಬಿಟ್ಟು ಜಮ್ಮುವಿಗೆ ತೆರಳಿದ್ದಾರೆ. ಇತ್ತೀಚೆಗೆ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರು ನಡೆಸುತ್ತಿರುವ ದಾಳಿಯಿಂದ ಕಂಗೆಟ್ಟು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

‘1990ರ ಅವಧಿಯಲ್ಲಿ, ಭಯೋತ್ಪಾದಕ ಕೃತ್ಯಗಳು ಮಿತಿ ಮೀರಿದ್ದಂತಹ ಕಷ್ಟಕರ ಸಮಯದಲ್ಲೂ ಅಲ್ಲೇ ನೆಲೆಯೂರಿದ್ದ ಕಾಶ್ಮೀರಿ ಪಂಡಿತರ ಪೈಕಿ ಕೆಲವರಿಗೆ ಇತ್ತೀಚೆಗೆ ನಡೆದ ಉಗ್ರರ ದಾಳಿಯಿಂದ ಭಯ ಶುರುವಾಗಿದೆ’ ಎಂದು ಚೌಧರಿಗುಂಡ್‌ ಗ್ರಾಮದ ನಿವಾಸಿಗಳು ಹೇಳಿಕೊಂಡಿದ್ದಾರೆ.

‘35-40 ಸದಸ್ಯರಿರುವ 10 ಕಾಶ್ಮೀರಿ ಪಂಡಿತ್‌ ಕುಟುಂಬಗಳು ನಮ್ಮ ಗ್ರಾಮವನ್ನು ತೊರೆದಿದ್ದಾರೆ. ಇತ್ತೀಚೆಗೆ ನಡೆದ ಉಗ್ರರ ದಾಳಿಯಿಂದ ಭಯಪಟ್ಟಿದ್ದರು. ಈಗ ಗ್ರಾಮವೇ ಖಾಲಿಯಾಗಿದೆ’ ಎಂದು ಉಗ್ರರಿಂದ ಕೊಲೆ ಬೆದರಿಕೆ ಎದುರಿಸುತ್ತಿರುವ ಚೌಧರಿಗುಂಡ್‌ ಗ್ರಾಮದ ನಿವಾಸಿಯೊಬ್ಬರು ತಿಳಿಸಿದ್ದಾರೆ.

ಕಳೆದ ಅಕ್ಟೋಬರ್‌ 15ರಂದು ಚೌಧರಿಗುಂಡ್‌ ಗ್ರಾಮದಲ್ಲಿ ಕಾಶ್ಮೀರಿ ಪಂಡಿತ್‌ ಪುರಾನ್‌ ಕೃಷ್ಣನ್‌ ಭಟ್‌ ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅಕ್ಟೋಬರ್‌ 18ರಂದು ಕಾಶ್ಮೀರಿ ಪಂಡಿತರಾದ ಮೋನಿಶ್‌ ಕುಮಾರ್‌ ಮತ್ತು ರಾಮ್‌ ಸಾಗರ್‌ ಅವರ ಹತ್ಯೆ ನಡೆದಿತ್ತು. ಉಗ್ರರು ಅವರ ಮನೆಯ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.