ADVERTISEMENT

ಕಾಶ್ಮೀರ: ನಿರ್ಮಾಣ ಹಂತದ ಸುರಂಗ ಕುಸಿತ, 10 ಕಾರ್ಮಿಕರು ಸಿಲುಕಿರುವ ಶಂಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮೇ 2022, 8:18 IST
Last Updated 20 ಮೇ 2022, 8:18 IST
ನಿರ್ಮಾಣ ಹಂತದ ಸುರಂಗದ ಒಂದು ಭಾಗ ಕುಸಿದಿರುವ ದೃಶ್ಯ
ನಿರ್ಮಾಣ ಹಂತದ ಸುರಂಗದ ಒಂದು ಭಾಗ ಕುಸಿದಿರುವ ದೃಶ್ಯ    

ಜಮ್ಮು: ರಾಂಬನ್‌ ಜಿಲ್ಲೆಯ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಿರ್ಮಾಣ ಹಂತದ ಸುರಂಗ ಗುರುವಾರ ರಾತ್ರಿ ಕುಸಿದಿರುವ ಪರಿಣಾಮ ಸುಮಾರು 10 ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ತಡರಾತ್ರಿ ಘಟನೆ ನಡೆದಿದ್ದು, ರಾತ್ರಿಯಿಡೀ ಬೃಹತ್‌ ಕಾರ್ಯಾಚರಣೆ ನಡೆಸಿ ಅವಶೇಷಗಳಡಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೆಲ್ಲ ಬಹುತೇಕ ಹೊರ ರಾಜ್ಯದವರಾಗಿದ್ದಾರೆ. ಅವಶೇಷಗಳಡಿ ಸಿಲುಕಿದವರು ಬದುಕುಳಿಯು ವ ಸಾಧ್ಯತೆ ಕ್ಷೀಣವಾಗಿದೆ.

ಪಶ್ಚಿಮ ಬಂಗಾಳದ ಮೂಲದ ಜಾಧವ್‌ ರಾಯ್‌ (23), ಗೌತಮ್‌ ರಾಯ್‌(22), ಸುಧೀರ್‌ ರಾಯ್‌(31), ದೀಪಕ್‌ ರಾಯ್‌(33) ಹಾಗೂ ಪರಿಮಳ್‌ ರಾಯ್‌(38), ಶಿವ ಚೌವ್ಹಾಣ್‌(26) . ಅಸ್ಸಾಂನ ನೇಪಾಳಿ ಪ್ರಜೆಗಳಾದ ನವರಾಜ್‌ ಚೌಧರಿ (26), ಕುಶಿ ರಾಮ್‌(25), ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಾದ ಮಜಾಫ್ಫರ್‌ (38) ಹಾಗೂ ಇಸ್ರಾತ್‌ (30) ಅವಶೇಷಗಳಡಿ ಸಿಲುಕಿದ ಕಾರ್ಮಿಕರು.ಕಂಪನಿಯ ಲೆಕ್ಕಪರಿಶೋಧನಾ ವಿಭಾಗದ ಜಾರ್ಖಂಡ್‌ ಮೂಲದ ವಿಷ್ಣು ಗೋಲ(33) ಹಾಗೂ ಜಮ್ಮು ಮತ್ತು ಕಾಶ್ಮೀರದ ಅಮೀನ್‌ (26) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

‘ಮಧ್ಯರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಿರುವ ಜಿಲ್ಲಾಡಳಿತವು ಬಂಡೆಗಳಡಿ ಸಿಲುಕಿದ್ದ ಮೂವರನ್ನು ರಕ್ಷಿಸಿ, ಅವರಲ್ಲಿ ಒಬ್ಬನನ್ನು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದೆ. ಸುರಂಗ ಕುಸಿತದಿಂದ ಅನೇಕ ಯಂತ್ರೋಪಕರಣಗಳು ಹಾಗೂ ಟ್ರಕ್‌ಗಳು ಹಾನಿಯಾಗಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ರಾಂಬನ್‌ನ ಖೂನಿ ನಲ್ಹಾ ಎಂಬಲ್ಲಿ ಗುರುವಾರ ರಾತ್ರಿ 10.15ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯ–ಟಿ3 ಸುರಂಗದ ಮುಂಭಾಗವು ಕುಸಿದಿದೆ. ಕಾಮಗಾರಿಯ ಹೊಣೆಹೊತ್ತ ಸರ್ಲಾ ಕಂಪೆನಿಯ 11ರಿಂದ 12 ಮಂದಿ ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ರಾಂಬನ್ ಮತ್ತು ರಾಮ್ಸು ನಡುವಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯ ನಿರ್ಮಾಣ ಹಂತದ ಸುರಂಗದ ಒಂದು ಭಾಗವು ಕುಸಿದ ಘಟನೆಯು ದುರದೃಷ್ಟಕರ.ರಾಂಬಲ್‌ ಜಿಲ್ಲಾಧಿಕಾರಿ ಮಸ್ರತ್‌ ಇಸ್ಲಾಂ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ.ಸುಮಾರು 10 ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ. ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸ್ಥಳೀಯ ಆಡಳಿತ ಹಾಗೂ ಪೊಲೀಸ್‌ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.