ADVERTISEMENT

ಜೂನ್ 24ಕ್ಕೆ ಮೋದಿ ನೇತೃತ್ವದ ಸಭೆ: ಜಮ್ಮು–ಕಾಶ್ಮೀರ ರಾಜಕೀಯ ಪಕ್ಷಗಳ ಸಮಾಲೋಚನೆ

ಡೆಕ್ಕನ್ ಹೆರಾಲ್ಡ್
Published 20 ಜೂನ್ 2021, 11:34 IST
Last Updated 20 ಜೂನ್ 2021, 11:34 IST
ಫಾರೂಕ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ (ಪಿಟಿಐ ಸಂಗ್ರಹ ಚಿತ್ರ)
ಫಾರೂಕ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ (ಪಿಟಿಐ ಸಂಗ್ರಹ ಚಿತ್ರ)   

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಕರೆದಿರುವ ಸಭೆಯಲ್ಲಿ ಭಾಗವಹಿಸುವ ಕುರಿತು ತೀರ್ಮಾನ ತೆಗೆದುಕೊಳ್ಳುವ ಸಲುವಾಗಿ ಜಮ್ಮು–ಕಾಶ್ಮೀರದ ರಾಜಕೀಯ ಪಕ್ಷಗಳು ಸಮಾಲೋಚನೆಯಲ್ಲಿ ತೊಡಗಿವೆ.

ಪಿಡಿಪಿಯ ರಾಜಕೀಯ ವ್ಯವಹಾರಗಳ ಸಮಿತಿಯು ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ನೇತೃತ್ವದಲ್ಲಿ ವರ್ಚುವಲ್ ಸಭೆ ನಡೆಸಿದೆ.

ಬಳಿಕ ವರದಿಗಾರರ ಜತೆ ಮಾತನಾಡಿರುವ ಮುಫ್ತಿ, ವಿಧಾನಸಭಾ ಕ್ಷೇತ್ರಗಳನ್ನು ನಿರ್ಧರಿಸುವುದು ಮತ್ತು ಚುನಾವಣೆ ನಡೆಸುವುದು ಮೋದಿ ಸಭೆಯ ಅಜೆಂಡಾ ಆಗಿರಬಹುದು. ಆದರೆ ಅದು ನಮ್ಮ ಕಾರ್ಯಸೂಚಿಯಲ್ಲ ಎಂದು ಹೇಳಿದ್ದಾರೆ.

ADVERTISEMENT

‘ಯಾವುದೇ ಸಭೆ ನಡೆಸುವ ಮೊದಲು ಕೇಂದ್ರ ಸರ್ಕಾರವು ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಬೇಕಿತ್ತು. ಪ್ರಧಾನಿ ನೇತೃತ್ವದ ಸಭೆಯಲ್ಲಿ ಭಾಗವಹಿಸಬೇಕೇ ಎಂಬ ಬಗ್ಗೆ ಅಂತಿಮ ತೀರ್ಮಾನವನ್ನು ಪಿಎಜಿಡಿ (ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಷನ್) ಮೈತ್ರಿಕೂಟದ ಸಭೆಯ ಬಳಿಕ ನಿರ್ಧರಿಸಲಾಗುವುದು’ ಎಂದು ಮುಫ್ತಿ ಹೇಳಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ಕೂಡ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ನೇತೃತ್ವದಲ್ಲಿ ಸಭೆ ನಡೆಸಿದೆ.

‘ನಾವು ಸಮಾಲೋಚನೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಸೋಮವಾರ ಮಧ್ಯಾಹ್ನದ ವೇಳೆಗೆ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಪ್ರಾಂತೀಯ ಅಧ್ಯಕ್ಷ ನಾಸಿರ್ ವಾನಿ ತಿಳಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ನಡೆಸುವುದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸುವ ಸಲುವಾಗಿ ಕೇಂದ್ರ ಸರ್ಕಾರವು ಜೂನ್ 24ಕ್ಕೆ ಸಭೆ ಆಯೋಜಿಸಿದ್ದು, ಜಮ್ಮು–ಕಾಶ್ಮೀರದ ರಾಜಕೀಯ ಪಕ್ಷಗಳಿಗೆ ಆಹ್ವಾನ ಕಳುಹಿಸಿದೆ.

ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಜೆಕೆಎಪಿ ಪಕ್ಷದ ಅಲ್ತಾಫ್ ಬುಕಾರಿ ಮತ್ತು ಪೀಪಲ್ಸ್ ಕಾನ್ಫರೆನ್ಸ್‌ನ ಸಜ್ಜದ್ ಲೋನ್ ಅವರಿಗೆ ಸಭೆಗೆ ಆಹ್ವಾನ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಶುಕ್ರವಾರ ತಿಳಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.