ADVERTISEMENT

ಶ್ರೀನಗರ: ಕೆಲವೆಡೆ ಮತ್ತೆ ನಿರ್ಬಂಧ, ಬಂಧಿತರ ಸಂಖ್ಯೆ 4,000 ಕ್ಕೂ ಹೆಚ್ಚು

ಪಿಟಿಐ
Published 18 ಆಗಸ್ಟ್ 2019, 20:23 IST
Last Updated 18 ಆಗಸ್ಟ್ 2019, 20:23 IST
   

ಶ್ರೀನಗರ: ನಗರದ ಕೆಲವು ಭಾಗಗಳಲ್ಲಿ ನಿರ್ಬಂಧವನ್ನು ಭಾನುವಾರ ಇನ್ನಷ್ಟು ಕಠಿಣಗೊಳಿಸಲಾಗಿದೆ. ಶನಿವಾರ ಕೆಲವೆಡೆ ಹಿಂಸಾಚಾರ ನಡೆದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಸತತ 14ನೇ ದಿನವೂ ಈ ಪ್ರದೇಶಗಳಲ್ಲಿ ನಿರ್ಬಂಧ ಮುಂದುವರಿದಿದೆ.

ಶ್ರೀನಗರ ಮತ್ತು ಕಾಶ್ಮೀರದ ಇತರ ಭಾಗಗಳಲ್ಲಿ ನಿರ್ಬಂಧಗಳನ್ನು ಶನಿವಾರ ಸಡಿಲಿಸಲಾಗಿತ್ತು. ಬಳಿಕ, ಶ್ರೀನಗರದ ಕೆಲವೆಡೆ ಹಿಂಸಾಚಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿಭಟನೆ ನಡೆದಿದೆ. ಪ್ರತಿಭಟನಕಾರರಲ್ಲಿ ಕೆಲವರು ಗಾಯಗೊಂಡಿದ್ದಾರೆ. ಅವರ ಸಂಖ್ಯೆ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಹಜ್‌ ಯಾತ್ರೆ ಪೂರ್ಣಗೊಳಿಸಿ ಹಿಂದಿರುಗಿದ ಸುಮಾರು 300 ಮಂದಿಯನ್ನು ಹೊತ್ತ ವಿಮಾನ ಭಾನುವಾರ ಬೆಳಿಗ್ಗೆ ಶ್ರೀನಗರ ನಿಲ್ದಾಣದಲ್ಲಿ ಇಳಿದಿದೆ. ಈ ಯಾತ್ರಿಕರು ತಮ್ಮ ತಮ್ಮ ಮನೆಗಳಿಗೆ ತಲುಪಲು ಬೇಕಾದ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ವಿಮಾನ ನಿಲ್ದಾಣದಲ್ಲಿ ಇವರನ್ನು ಬರಮಾಡಿಕೊಳ್ಳಲು ಕುಟುಂಬದ ಒಬ್ಬ ವ್ಯಕ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ರಾಜ್ಯ ರಸ್ತೆ ಸಾರಿಗೆ ಬಸ್‌ನಲ್ಲಿ ಇವರೆಲ್ಲರನ್ನೂ ಮನೆಗೆ ಕಳುಹಿಸಲಾಗಿದೆ.

ಸಹಜ ಸ್ಥಿತಿಯತ್ತ

*ಕಾಶ್ಮೀರದ 35 ಪೊಲೀಸ್‌ ಠಾಣೆ ವ್ಯಾಪ್ತಿಗಳಲ್ಲಿ ನಿರ್ಬಂಧ ಸಡಿಲು

* ದೂರವಾಣಿ ಸೇವೆ ನಿರ್ಬಂಧ ಹಲವೆಡೆ ರದ್ದು, ಇನ್ನಷ್ಟು ಪ್ರದೇಶಗಳಿಗೆ ಇದನ್ನು ವಿಸ್ತರಿಸಲು ಪ್ರಯತ್ನ

*ಶ್ರೀನಗರದ ಕೆಲವೆಡೆ ಮತ್ತು ಇತರ ಕೆಲವು ನಗರಗಳಲ್ಲಿ ಖಾಸಗಿ ವಾಹನ ಓಡಾಟ ಆರಂಭ

*ಕೆಲವು ಪ್ರದೇಶಗಳಲ್ಲಿ ಅಂಗಡಿಗಳು ತೆರೆದಿವೆ

*ಇಂದಿನಿಂದ ಶಾಲೆ–ಕಾಲೇಜುಗಳು ಶುರು

*ಆಗಸ್ಟ್‌ 5ರ ನಂತರ ಬಂಧಿತರ ಸಂಖ್ಯೆ 4,000ಕ್ಕೂ ಹೆಚ್ಚು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.