ADVERTISEMENT

ಬಕ್ರೀದ್‌ ಹಿನ್ನೆಲೆ: ಜಮ್ಮು-ಕಾಶ್ಮೀರದಲ್ಲಿ ಗೋವು, ಒಂಟೆ ಹತ್ಯೆ ನಿಷೇಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2021, 8:42 IST
Last Updated 16 ಜುಲೈ 2021, 8:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಶ್ರೀನಗರ: ಜುಲೈ 21 ರಂದು ಆಚರಿಸಲಾಗುವ ಬಕ್ರೀದ್ ಸಂದರ್ಭದಲ್ಲಿ ಜಮ್ಮು- ಕಾಶ್ಮೀರದಾದ್ಯಂತ ಹಸು, ಕರು ಹಾಗೂ ಒಂಟೆಗಳ ಹತ್ಯೆಯನ್ನು ನಿಷೇಧಿಸಿ ಅಲ್ಲಿನ ಆಡಳಿತ ಆದೇಶ ಹೊರಡಿಸಿದೆ.

ಜಮ್ಮು- ಕಾಶ್ಮೀರದ ಪ್ರಾಣಿ ಸಾಕಾಣಿಕೆ ಮತ್ತು ಮೀನುಗಾರಿಕೆ ಇಲಾಖೆಯ ಯೋಜನಾ ನಿರ್ದೇಶಕರು ಈ ಆದೇಶವನ್ನು ಹೊರಡಿಸಿದ್ದಾರೆ.

ಆಕಳು, ಕರು, ಹೋರಿ, ಎತ್ತು ಹಾಗೂ ಒಂಟೆಗಳ ಹತ್ಯೆ ನಿಷೇಧದ ಬಗೆಗಿನ ಆದೇಶದ ಪ್ರತಿಯನ್ನು ಅಲ್ಲಿನ ವಿಭಾಗೀಯ ಆಯುಕ್ತರು ಮತ್ತು ಐಜಿಪಿಗಳಿಗೆ ರವಾನಿಸಲಾಗಿದೆ.

ADVERTISEMENT

ಬಕ್ರೀದ್ ವೇಳೆಗೆ ಜಮ್ಮು-ಕಾಶ್ಮೀರದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಿ ಹತ್ಯೆಯಾಗುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿ ಪ್ರಾಣಿ ಕಲ್ಯಾಣ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಅಧಿಕಾರಿಗಳಿಗೆ ರವಾನಿಸಲಾದ ಪ್ರತಿಯಲ್ಲಿ ಕೇಂದ್ರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಪ್ರಾಣಿ ಕಲ್ಯಾಣ ಮಂಡಳಿಯ ಅಧಿಕೃತ ಪತ್ರದ ಬಗ್ಗೆ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.