ಅನಂತನಾಗ್ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಭೂಕುಸಿತ ಸಂಭವಿಸಿರುವುದು
ಪಿಟಿಐ ಚಿತ್ರ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿ ಭಾರಿ ಮಳೆ, ದಿಢೀರ್ ಪ್ರವಾಹ ಮತ್ತು ಭೂಕುಸಿತದಿಂದ ಉಂಟಾದ ಅವಘಡಗಳಿಂದಾಗಿ 283 ಮನೆಗಳಿಗೆ ಹಾನಿಯಾಗಿದ್ದು, ಸುಮಾರು 950 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.
ಜಿಲ್ಲೆಯ 84 ರಸ್ತೆಗಳು, 98 ನೀರು ಸರಬರಾಜು ಯೋಜನೆಗಳು ಮತ್ತು 71 ಪವರ್ ಫೀಡರ್‌ಗಳಿಗೂ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ದ್ರುಬಲಾದಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಮತ್ತು ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ರಂಬನ್‌ನ ಉಪ ಜಿಲ್ಲಾಧಿಕಾರಿ ಅಲ್ಯಾಸ್ ಖಾನ್ ತಿಳಿಸಿದರು.
ಸತತವಾಗಿ ಸುರಿಯುತ್ತಿರುವ ಮಳೆಯ ಕಾರಣ 84 ರಸ್ತೆಗಳು ಹಾನಿಗೊಳಗಾಗಿವೆ. ಈ ಪೈಕಿ 30 ರಸ್ತೆಗಳನ್ನು ದುರಸ್ತಿ ಮಾಡಲಾಗಿದೆ ಎಂದು ಹೇಳಿದರು.
ರಸ್ತೆಗಳು ಮತ್ತು ನೀರು ಸರಬರಾಜು ಮೂಲಸೌಕರ್ಯದ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಸ್ಥಳಾಂತರಗೊಂಡ ಕುಟುಂಬಗಳಿಗಾಗಿ ವೈದ್ಯಕೀಯ ಶಿಬಿರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಯಮುನಾ ನದಿ ನೀರಿನ ಮಟ್ಟ ಅಲ್ಪ ಇಳಿಕೆ
ದೆಹಲಿಯ ಹಳೆಯ ರೈಲ್ವೆ ಸೇತುವೆ ಸಮೀಪ ಯಮುನಾ ನದಿಯ ನೀರಿನ ಮಟ್ಟ ಶುಕ್ರವಾರ 207.31 ಮೀಟರ್‌ಗೆ ಇಳಿಕೆಯಾಗಿದೆ. ಇದಕ್ಕೂ ಮುನ್ನಾದಿನ 207.48 ಮೀಟರ್‌ಗೆ ಏರಿಕೆಯಾಗುವ ಮೂಲಕ ಈ ಋತುವಿನ ಗರಿಷ್ಠ ಮಟ್ಟ ತಲುಪಿತ್ತು.
350 ಯಾತ್ರಾರ್ಥಿಗಳ ಸುರಕ್ಷಿತ ರವಾನೆ
ಶಿಮ್ಲಾ/ ಬಿಲಾಸಪುರ: ಮಣಿಮಹೇಶ್ ಯಾತ್ರೆಗೆ ತೆರಳಿ ಅತಂತ್ರರಾಗಿದ್ದ ಸುಮಾರು 350 ಯಾತ್ರಾರ್ಥಿಗಳನ್ನು ಹಿಮಾಚಲ ಪ್ರದೇಶದ ಭರಮೌರ್‌ನಿಂದ ಚಂಬಾಕ್ಕೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಆಗಸ್ಟ್ 15ರಿಂದ ಆರಂಭವಾದ ಮಣಿಮಹೇಶ್ ಯಾತ್ರೆ ಸಂದರ್ಭದಲ್ಲಿ 17 ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ಚಂಬಾ ಜಿಲ್ಲೆಯ ವಿವಿಧೆಡೆ ನೂರಾರು ಯಾತ್ರಾರ್ಥಿಗಳು ಅತಂತ್ರರಾಗಿದ್ದಾರೆ.
ದಕ್ಷಿಣ ಕೊರಿಯಾ ಪ್ರಜೆಗಳ ರಕ್ಷಣೆ
ಲೇಹ್/ಜಮ್ಮು: ಚಾರಣದ ಸಂದರ್ಭದಲ್ಲಿ ಗಂಭೀರವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದ ದಕ್ಷಿಣಿ ಕೊರಿಯಾದ ಇಬ್ಬರು ಪ್ರಜೆಗಳನ್ನು ಭಾರತೀಯ ಸೇನೆ ರಕ್ಷಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು. ಆದರೆ ಚಿಕಿತ್ಸೆ ಸಂದರ್ಭದಲ್ಲಿ ಚಾರಣಿಗರೊಬ್ಬರು ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.