ADVERTISEMENT

ಕಾಶ್ಮೀರದಲ್ಲಿ ಎನ್‌ಕೌಂಟರ್: ಸ್ಫೋಟಕ ಪರಿಣತ ಸೇರಿ ನಾಲ್ವರು ಗುಂಡಿಗೆ ಬಲಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 17:48 IST
Last Updated 25 ಡಿಸೆಂಬರ್ 2021, 17:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಶನಿವಾರ 12 ಗಂಟೆಗಳ ಅವಧಿಯಲ್ಲಿ ಭಾರತೀಯ ಸೇನೆ ಹಾಗೂ ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಸುಧಾರಿತ ಸ್ಫೋಟಕ ಪರಿಣತ ಸೇರಿ ನಾಲ್ವರು ಉಗ್ರರು ಹತ್ಯೆಯಾಗಿದ್ದಾರೆ.

ಪುಲ್ವಾಮ ಜಿಲ್ಲೆಯ ತ್ರಾಲ್‌ ಸಮೀಪದ ಹರ್ದುಮಿರ್‌ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಹತ್ಯೆಯಾಗಿದ್ದು, ಹತ್ಯೆಯಾದವರನ್ನು ನದೀಂ ಭಟ್‌ ಹಾಗೂ ರಸೂಲ್‌ ಅಲಿಯಾಸ್ ಆದಿಲ್‌ ಎಂದು ಗುರುತಿಸಲಾಗಿದೆ.

‘ಹತ್ಯೆಯಾದ ರಸೂಲ್‌ ಆದಿಲ್‌ ಸುಧಾರಿತ ಸ್ಫೋಟಕ ಪರಿಣತನಾಗಿದ್ದು,ಈತ ನಿಷೇಧಿತ ಅನ್ಸರ್ ಗಜ್ವತ್-ಉಲ್-ಹಿಂದ್(ಎಜಿಯುಎಚ್‌) ಸಂಘಟನೆ ಜತೆ ಗುರುತಿಸಿಕೊಂಡಿದ್ದ. ಹತ್ಯೆಯಾದ ಈ ಇಬ್ಬರು ಗ್ರೆನೆಡ್‌ ದಾಳಿ ಸೇರಿದಂತೆ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದರು.ಈ ಉಗ್ರರಿಂದ ಎರಡು ಎಕೆ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್‌ ತಿಳಿಸಿದರು.

ADVERTISEMENT

‘ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು, ಸೇನೆ ಹಾಗೂ ಭದ್ರತಾ ಪಡೆಗಳು ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ನಂತರ ಭದ್ರತಾ ಪಡೆಗಳ ಪ್ರತಿದಾಳಿಗೆ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ’ ಎಂದು ಅವರು ತಿಳಿಸಿದರು.

ಶೋಪಿಯಾನ್‌ ಜಿಲ್ಲೆಯ ಚೌಗಮ್‌ ಪ್ರದೇಶದಲ್ಲಿ ಶನಿವಾರ ಮುಂಜಾನೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಲಷ್ಕರ್‌–ಎ–ತೈಬಾ (ಎಲ್‌ಇಟಿ) ಉಗ್ರರು ಹತರಾಗಿದ್ದು, ಹತ್ಯೆಯಾದವರನ್ನು ಸಜಾದ್‌ ಅಹ್ಮದ್‌ ಚೆಕ್‌ ಹಾಗೂ ರಾಜ ಬಸಿತ್‌ ನಜೀರ್‌ ಎಂದು ಗುರುತಿಸಲಾಗಿದೆ.

‘ಹತ್ಯೆಯಾದ ಉಗ್ರರ ಪೈಕಿ ಒಬ್ಬ ಗ್ರೆನೆಡ್‌ ದಾಳಿ ಹಾಗೂ ನಾಗರಿಕರ ಹತ್ಯೆಯಲ್ಲಿ ಪಾಲ್ಗೊಂಡಿದ್ದ. ಮತ್ತೊಬ್ಬ ಇತ್ತೀಚೆಗಷ್ಟೆ ಉಗ್ರ ಸಂಘಟನೆ ಸೇರಿದ್ದ’ ಎಂದು ಐಜಿಪಿ ವಿಜಯಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.