ADVERTISEMENT

ಅಪಘಾತದ ಮಾಹಿತಿ, ಸ್ಥಳದ ಲೈವ್ ಲೊಕೇಷನ್ ಕಳಿಸಿ ರಕ್ಷಣಾ ಕಾರ್ಯಾಚರಣೆಗೆ ನೆರವಾದ ಯೋಧ

ಪಿಟಿಐ
Published 4 ಜೂನ್ 2023, 14:42 IST
Last Updated 4 ಜೂನ್ 2023, 14:42 IST
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಎನ್‌ಡಿಆರ್‌ಎಫ್‌ ಯೋಧರು (ಪಿಟಿಐ ಚಿತ್ರ)
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಎನ್‌ಡಿಆರ್‌ಎಫ್‌ ಯೋಧರು (ಪಿಟಿಐ ಚಿತ್ರ)   

ಭುವನೇಶ್ವರ/ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್‌ಡಿಆರ್‌ಎಫ್‌) ಯೋಧ ಎನ್‌.ಕೆ ವೆಂಕಟೇಶ್‌ ಎಂಬುವವರು ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ದುರಂತದ ಕುರಿತು ಅಧಿಕಾರಿಗಳಿಗೆ ಮೊದಲು ಮಾಹಿತಿ ನೀಡಿದ ವ್ಯಕ್ತಿ. ಅವರ ಸಮಯಪ್ರಜ್ಞೆಯಿಂದಾಗಿ ದುರಂತ ಸ್ಥಳಕ್ಕೆ ರಕ್ಷಣಾ ಪಡೆಗಳು ಶೀಘ್ರ ತಲುಪಲು ಸಾಧ್ಯವಾಯಿತು. 

ಕೋಲ್ಕತ್ತದ ಎನ್‌ಡಿಆರ್‌ಎಫ್‌ನ 2ನೇ ಬೆಟಾಲಿಯನ್‌ನ ಯೋಧ ವೆಂಕಟೇಶ್ ಎನ್.ಕೆ. (39) ಅವರು ತಮಿಳುನಾಡಿನ ತಾಂಜಾವೂರಿನವರು. ಅವರು ಶುಕ್ರವಾರ ಪಶ್ಚಿಮ ಬಂಗಾಳದ ಹೌರಾದಿಂದ ತಮಿಳುನಾಡಿಗೆ ಕೋರೊಮಂಡಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಎಸಿ ಕೋಚ್‌ನಲ್ಲಿದ್ದ ಅವರು ಅಪಘಾತದಲ್ಲಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಅವರು ಸುಬೇದಾರ್‌ ಮೇಜರ್‌ ಅವರಿಗೆ ಕರೆ ಮಾಡಿ ರೈಲು ಅಪಘಾತದ ತೀವ್ರತೆ ಕುರಿತು ಮಾಹಿತಿ ನೀಡಿದ್ದಾರೆ. ಜೊತೆಗೆ, ಸ್ಥಳದ ಲೈವ್‌ ಲೊಕೇಷನ್‌ಅನ್ನು ವಾಟ್ಸ್‌ಆ್ಯಪ್‌ ಮೂಲಕ ಕಳಿಸಿದ್ದಾರೆ. 

‘ಸುಬೇದಾರ್‌ ಮೇಜರ್‌ ಅವರು ಒಡಿಶಾದ ಎನ್‌ಡಿಆರ್‌ಎಫ್‌ ಬೆಟಾಲಿಯನ್‌ಗೆ ಕೂಡಲೇ ಮಾಹಿತಿ ನೀಡಿದರು. ಇದರಿಂದಾಗಿ ದುರಂತ ಸಂಭವಿಸಿದ 1 ಗಂಟೆಯೊಳಗೆ ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್‌ ಸ್ಥಳಕ್ಕೆ ತಲುಪಲು ಸಾಧ್ಯವಾಯಿತು. ಎನ್‌ಡಿಆರ್‌ಎಫ್‌ ತಂಡ ಸ್ಥಳಕ್ಕೆ ಧಾವಿಸುವ ಮುನ್ನವೇ ಸ್ಥಳೀಯರು ತಮ್ಮ ಬಳಿಯಿದ್ದ ವಸ್ತುಗಳನ್ನು ಬಳಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು’ ಎಂದು ವೆಂಕಟೇಶ್‌ ಹೇಳಿದರು. 

ADVERTISEMENT

‘ಸುಮಾರು 6.30ಕ್ಕೆ ರೈಲು ಬಾಲಸೋರ್‌ನಲ್ಲಿ ಇತ್ತು. ಬಾಲಸೋರ್‌ ನಿಲ್ದಾಣದಿಂದ ಹೊರಟ 20 ನಿಮಿಷಗಳ ಒಳಗೆ ಅಸಹಜ ಘಟನೆಗಳು ನಡೆದವು. ನಾವು ಎಸಿ ಬೋಗಿಯಲ್ಲಿ ಇದ್ದ ಕಾರಣ ನಮಗೆ ಸರಕು ಸಾಗಾಣೆ ರೈಲು ಕಂಡಿತು. ಆದರೆ ಅದು ನಿಂತಿದೆಯೊ ಅಥವಾ ಚಲಿಸುತ್ತಿದೆಯೋ ಎಂದು ತಿಳಿಯಲಿಲ್ಲ. ಅಷ್ಟರಲ್ಲಿ ಭಾರಿ ಸದ್ದು ಕೇಳಿತು. ಬೋಗಿಯಲ್ಲಿದ್ದ ಜನರು ಅವರ ಆಸನಗಳಿಂದ ಕೆಳಗೆ ಬೀಳಲಾರಂಭಿಸಿದರು. ಆದರೆ ನಮ್ಮ ಬೋಗಿ ಹಳಿತಪ್ಪಲಿಲ್ಲ’ ಎಂದು ವೆಂಕಟೇಶ್‌ ಹೇಳಿದರು. 

ರೈಲ್ವೆ ಹಳಿ ಪಕ್ಕದ ರಸ್ತೆ ದಾಟಿ ಅಲ್ಲಿಯ ಸ್ಥಳೀಯರಿಗೆ ಅಪಘಾತದ ಕುರಿತು ಮಾಹಿತಿ ನೀಡಿದೆ. ಸ್ಥಳೀಯರೂ ರಕ್ಷಣಾ ಕಾರ್ಯದಲ್ಲಿ ತೊಡಗಿದರು ಎಂದು ಅವರು ಹೇಳಿದ್ದಾರೆ. 

‘ರಕ್ಷಣಾ ತಂಡಗಳು ಸ್ಥಳ ತಲುಪುವುದರ ಒಳಗೆ ರೈಲಿನಲ್ಲಿದ್ದ ಜೀವಗಳನ್ನು ಉಳಿಸಲು ಏನು ಮಾಡಲು ಸಾಧ್ಯವಿತ್ತೋ ಅದೆಲ್ಲವನ್ನೂ ವೆಂಕಟೇಶ್ ಮಾಡಿದರು’ ಎಂದು ರೈಲ್ವೆಯ ಅಧಿಕಾರಿಯೊಬ್ಬರು ತಿಳಿಸಿದರು

2021ರಲ್ಲಿ ಗಡಿ ಭದ್ರತಾ ಪಡೆಯಿಂದ ಎನ್‌ಡಿಆರ್‌ಎಫ್‌ಗೆ ಸೇರ್ಪಡೆಗೊಂಡಿರುವ ವೆಂಕಟೇಶ್, ಗಾಯಗೊಂಡ ಮತ್ತು ರೈಲುಗಳ ನಡುವೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲು, ಪತ್ತೆ ಹಚ್ಚಲು ತಮ್ಮ ಮೊಬೈಲ್ ಫೋನಿನ ಬೆಳಕನ್ನೇ ಬಳಸಿದ್ದರು. ವೆಂಕಟೇಶ್ ಅವರ ಸಮಯಪ್ರಜ್ಞೆಯಿಂದಾಗಿ ಎಷ್ಟೋ ಜನರ ಜೀವ ಉಳಿಯಿತು. ರಕ್ಷಣಾ ತಂಡಗಳು ಸ್ಥಳಕ್ಕೆ ಬರುವ ತನಕ ವೆಂಕಟೇಶ್ ಮತ್ತು ಇತರ ಸ್ಥಳೀಯರು ತಮ್ಮ ಮೊಬೈಲ್ ಫೋನ್ ಮತ್ತು ಟಾರ್ಚ್‌ಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.