ADVERTISEMENT

ಕಾಂಗ್ರೆಸ್ ವರ್ತನೆಗೆ ಜೆಡಿಎಸ್‌ ಶಾಸಕರ ಸಿಟ್ಟು

ಲೋಕಸಭೆ ಚುನಾವಣೆಯಲ್ಲಿ 10 ಸ್ಥಾನಕ್ಕೆ ಪಟ್ಟು

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 19:18 IST
Last Updated 8 ಜನವರಿ 2019, 19:18 IST
   

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಹಾಗೂ ತಮ್ಮ ಪಕ್ಷದ ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕರು, ಮುಖಂಡರು ನೀಡುತ್ತಿರುವ ಆಕ್ಷೇಪಾರ್ಹ ಹೇಳಿಕೆ ನಿಲ್ಲಿಸದಿದ್ದರೆ ತಾವೂ ಅದೇ ರೀತಿ ವರ್ತಿಸಬೇಕಾಗುತ್ತದೆ ಎಂದು ಜೆಡಿಎಸ್ ಶಾಸಕರು ಒಕ್ಕೊರಲ ಧ್ವನಿ ಮೊಳಗಿಸಿದ್ದಾರೆ.

ಎಚ್‌.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಸಮ್ಮುಖದಲ್ಲಿ ಮಂಗಳವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ, ಈ ಅಸಮಾಧಾನ ಹೊರಬಿದ್ದಿದೆ.

‘ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಅವರು ಮುಖ್ಯಮಂತ್ರಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಸಚಿವರ ಶೈಕ್ಷಣಿಕ ಅರ್ಹತೆ ಕುರಿತು ಕೀಳಾಗಿ ಟೀಕಿಸಿದ್ದಾರೆ. ಇಂತಹದೇ ನಡವಳಿಕೆಗಳಿಗೆ ಕೆಲವು ಸಚಿವರು, ಶಾಸಕರು ಧ್ವನಿಗೂಡಿಸುತ್ತಿದ್ದಾರೆ. ಇದು ಹೀಗೇ ಮುಂದುವರಿದರೆ ಅವನ್ನೆಲ್ಲ ಕೇಳಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ’ ಎಂದು ಕೆಲವು ಶಾಸಕರು ಕಿಡಿಕಾರಿದ್ದಾರೆ.

ADVERTISEMENT

ಜೆಡಿಎಸ್‌ಗೆ ಹಂಚಿಕೆಯಾಗಿರುವ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ನಿಗಮ–ಮಂಡಳಿಗಳಿಗೆ ನೇಮಕ ಮಾಡುವಾಗ ಮೈತ್ರಿ ಧರ್ಮ ಬಿಟ್ಟು ಕಾಂಗ್ರೆಸ್‌ನವರು ನಡೆದುಕೊಂಡಿದ್ದಾರೆ. ಇದನ್ನು ‌‌ಮೌನವಾಗಿ ಸಹಿಸುವ ಅಗತ್ಯವಿಲ್ಲ. ಈ ವಿಷಯದಲ್ಲಿ ಸಚಿವ ಎಚ್.ಡಿ. ರೇವಣ್ಣ ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಶಾಸಕರು ಪ್ರತಿಪಾದಿಸಿದ್ದಾರೆ.

‘ಪಕ್ಷದ ನಾಯಕರು ಇದನ್ನೆಲ್ಲ ಸಹಿಸಿಕೊಂಡು ಸುಮ್ಮನಿರಬಾರದು. ಸಿದ್ದರಾಮಯ್ಯನವರ ಬಳಿ ಈ ಬಗ್ಗೆ ಚರ್ಚಿಸಿ, ಕಾಂಗ್ರೆಸ್‌ನವರಿಗೆ ತಿಳಿಹೇಳುವಂತೆ ಸೂಚಿಸಬೇಕು ಎಂದು ಶಾಸಕರು ದೇವೇಗೌಡರನ್ನು ಒತ್ತಾಯಿಸಿದರು’ ಎಂದು ಮೂಲಗಳು ಹೇಳಿವೆ.

ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ, ‘ಮೈತ್ರಿ ಸರ್ಕಾರ ಇದ್ದಾಗ ಸಣ್ಣಪುಟ್ಟ ಅಸಮಾಧಾನಗಳು ಸಹಜ. ಅದಕ್ಕೆಲ್ಲ ಶಾಸಕರು ಬೇಸರ ಪಟ್ಟುಕೊಳ್ಳಬಾರದು. ನಮ್ಮ ಪಕ್ಷದವರು ಮೈತ್ರಿಯ ಸೂಕ್ಷ್ಮ ಅರಿತು ಮಾತನಾಡಬೇಕು. ಕಾಂಗ್ರೆಸ್ ಶಾಸಕರ ನಡವಳಿಕೆಗಳನ್ನು ನಿಯಂತ್ರಿಸುವ ಕುರಿತು ದೇವೇಗೌಡರು ಹಾಗೂ ನಾನು ಮಾತುಕತೆ ನಡೆಸಿ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು.

ಮೂರನೇ ಒಂದರಷ್ಟು ಸ್ಥಾನ: ಲೋಕಸಭೆ ಚುನಾವಣೆಯಲ್ಲಿ ಮೂರನೇ ಒಂದರಷ್ಟು ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂಬ ದೇವೇಗೌಡರ ಸೂತ್ರಕ್ಕೆ ಶಾಸಕರು ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಕಣಕ್ಕೆ ಇಳಿಯುವುದು ಒಳಿತು. ಇದರಿಂದ ಪಕ್ಷಕ್ಕೂ ಲಾಭವಿದೆ. ರಾಜ್ಯದ 28 ಸ್ಥಾನಗಳ ಪೈಕಿ 9 ರಿಂದ 10 ಸ್ಥಾನಗಳಿಗೆ ಪಟ್ಟು ಹಿಡಿಯಬೇಕು ಎಂಬ ಬೇಡಿಕೆಯನ್ನೂ ಮಂಡಿಸಿದ್ದಾರೆ.

ಸ್ಥಾನ, ಕ್ಷೇತ್ರಗಳ ಹಂಚಿಕೆ ಹಾಗೂ ಇಂತಹದೇ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬ ಬೇಡಿಕೆಯನ್ನು ಯಾರೊಬ್ಬರೂ ಬಹಿರಂಗವಾಗಿ ವ್ಯಕ್ತಪಡಿಸಬಾರದು. ಪಕ್ಷದ ವರಿಷ್ಠರು ಸಮಾಲೋಚನೆ ನಡೆಸಿ, ಕಾಂಗ್ರೆಸ್‌ ನಾಯಕರ ಜತೆ ಹೊಂದಾಣಿಕೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಸಭೆಗೆ ತಿಳಿಸಿದರು.

ಫಾರೂಕ್‌ ಪರ ರೇವಣ್ಣ: ವಿಧಾನಪರಿಷತ್ತಿನ ಸದಸ್ಯ ಬಿ.ಎಂ. ಫಾರೂಕ್ ಅವರನ್ನು ಅಲ್ಪಸಂಖ್ಯಾತರ ಕೋಟಾದಡಿ ಸಚಿವರನ್ನು ಮಾಡಬೇಕು ಎಂದು ಸಚಿವ ರೇವಣ್ಣ ಸಭೆಯಲ್ಲಿ ಆಗ್ರಹಿಸಿದರು.

ಬುಧವಾರ ಪರಿಹಾರ?: ನಿಗಮ ಮಂಡಳಿ ಗೊಂದಲಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಮಂಗಳವಾರ ದೂರವಾಣಿಯಲ್ಲಿ ಚರ್ಚಿಸಿದ್ದಾರೆ. ಗೊಂದಲ ಪರಿಹರಿಸುವಂತೆ ವೇಣುಗೋಪಾಲ್‌ ಸೂಚಿಸಿದಾಗ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನವನ್ನು ತಾಂತ್ರಿಕ ಕಾರಣಕ್ಕೆ ಹಂಚಿಕೆ ಮಾಡದಿರುವ ಬಗ್ಗೆ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ. ಸುಧಾಕರ್‌ ಅವರನ್ನು ನೇಮಿಸಿದ ಬಳಿಕ ಯಾರಾದರೂ ನ್ಯಾಯಾಲಯದ ಮೆಟ್ಟಿಲೇರಿದರೆ ಸಮಸ್ಯೆಯಾಗುತ್ತದೆ ಎಂದಿದ್ದಾರೆ.

ಸಮನ್ವಯ ಸಮಿತಿ ಸಭೆಯಲ್ಲೇ ನಿಗಮ ಮಂಡಳಿಗಳ ಹಂಚಿಕೆ ಬಗ್ಗೆ ಮಾತುಕತೆ ನಡೆದಿದೆ. ಹೀಗಾಗಿ., ಪಕ್ಷ ಸೂಚಿಸಿದ ಹೆಸರುಗಳನ್ನು ನಿಗಮ ಮಂಡಳಿಗಳಿಗೆ ನೇಮಿಸುವುದುವುದು ಸೂಕ್ತ ಎಂದು ವೇಣುಗೋಪಾಲ್‌ ಆಗ್ರಹಿಸಿದಾಗ, ಈ ವಿಷಯದಲ್ಲಿ ‘ದೊಡ್ಡವರು’ (ದೇವೇಗೌಡ) ಮಾತನಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ‘ನಿಮ್ಮ ಜೊತೆ ಮಾತನಾಡಲು ಬುಧವಾರ ದಿನೇಶ್‌ ಮತ್ತು ಪರಮೇಶ್ವರ ಬರುತ್ತಾರೆ. ಮಾತುಕತೆ ಮೂಲಕ ಗೊಂದಲ ಬಗೆಹರಿಸಿ’ ಎಂದು ವೇಣುಗೋಪಾಲ್‌ ಸಲಹೆ ನೀಡಿದ್ದಾರೆ.

10 ನಿಗಮ ಮಂಡಳಿಗಳಿಗೆ ನೇಮಕ

ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳು ಹಾಗೂ ಸಂಸದೀಯ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನೇಮಕ ಮಾಡಲು ಕೊನೆಗೂ ಜೆಡಿಎಸ್‌ ಮುಂದಾಗಿದೆ. ಇನ್ನೆರಡು ದಿನಗಳಲ್ಲಿ ದೇವೇಗೌಡರು ಪಟ್ಟಿಯನ್ನು ಮುಖ್ಯಮಂತ್ರಿಗೆ ಕಳುಹಿಸಲಿದ್ದಾರೆ.

ಓರ್ವ ರಾಜಕೀಯ ಕಾರ್ಯದರ್ಶಿ, 4 ಸಂಸದೀಯ ಕಾರ್ಯದರ್ಶಿ ಹಾಗೂ 10 ನಿಗಮ ಮಂಡಳಿಗಳ ಅಧ್ಯಕ್ಷರನ್ನು ಸದ್ಯದಲ್ಲೇ ನೇಮಕ ಮಾಡಲಾಗುವುದು ಎಂದು ಸಭೆಗೆ ದೇವೇಗೌಡರು ತಿಳಿಸಿದರು.

ಚುನಾವಣೆಯಲ್ಲಿ ಸೋತವರಿಗೂ ಕಾರ್ಯದರ್ಶಿ, ನಿಗಮ–ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಕ್ಕೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.

10 ನಿಗಮ ಮಂಡಳಿಗಳ ಪೈಕಿ ಸೋತ ಮಾಜಿ ಶಾಸಕರಿಗೆ 2, ಹಾಲಿ 8 ಶಾಸಕರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.ಉತ್ತರ ಕರ್ನಾಟಕ ಭಾಗಕ್ಕೆ 1, ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಕ್ಕೆ ಸೇರಿದ ತಲಾ ಒಬ್ಬರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.