ADVERTISEMENT

ಜೆಇಇ: ರಾಜ್ಯದ ಗೌರವ್ ದಾಸ್‌ಗೆ ಮೊದಲ ರ‍್ಯಾಂಕ್

44 ಅಭ್ಯರ್ಥಿಗಳಿಗೆ 100 ಪರ್ಸೆಂಟೈಲ್‌ ಅಂಕ

ಪಿಟಿಐ
Published 15 ಸೆಪ್ಟೆಂಬರ್ 2021, 19:19 IST
Last Updated 15 ಸೆಪ್ಟೆಂಬರ್ 2021, 19:19 IST
   

ನವದೆಹಲಿ: ಜೆಇಇ (ಮೇನ್) ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದ ಗೌರವ್ ದಾಸ್‌ ಸೇರಿದಂತೆ 44 ಅಭ್ಯರ್ಥಿಗಳು 100 ಪರ್ಸೆಂಟೈಲ್‌ ಅಂಕ ಗಳಿಸಿದ್ದಾರೆ.

18 ಅಭ್ಯರ್ಥಿಗಳು ಅಗ್ರ ಶೇಯಾಂಕ ಪಡೆದಿದ್ದಾರೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.

ಶೇಕಡ (ಪರ್ಸೆಂಟ್) ಅಂಕಗಳ ಬದಲಿಗೆ ಒಟ್ಟು ವಿದ್ಯಾರ್ಥಿಗಳಲ್ಲಿ ಶೇಕಡ ಪ್ರಮಾಣವನ್ನು ಪರಿಗಣಿಸಿ, ಫಲಿತಾಂಶ ಪ್ರಕಟಿಸಲಾಗುತ್ತದೆ. ಇದಕ್ಕೆ ಪರ್ಸೆಂಟೈಲ್ ಎಂದು ಹೇಳಲಾಗುತ್ತದೆ.

ADVERTISEMENT

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಒಟ್ಟು ನಾಲ್ಕು ಹಂತಗಳಲ್ಲಿ ಜೆಇಇ (ಮೇನ್‌) ಆಯೋಜಿಸಿತ್ತು. 13 ಭಾಷೆಗಳಲ್ಲಿ ನಡೆದ ಪರೀಕ್ಷೆಗಳಿಗೆ 9.34 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.

ನಾಲ್ಕು ಹಂತಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅಭ್ಯರ್ಥಿಗಳ ಅಂಕಗಳನ್ನು ಪರಿಗಣಿಸಲಾಗಿದೆ.

ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಹಾಗೂ ಅಂಕ ಗಳಿಕೆಯನ್ನು ಸುಧಾರಿಸಿಕೊಳ್ಳಲು ಅವಕಾಶ ನೀಡುವ ಸಲುವಾಗಿ ಈ ವರ್ಷದಿಂದ ಅನ್ವಯವಾಗುವಂತೆ ಜೆಇಇ (ಮೇನ್‌) ಅನ್ನು ನಾಲ್ಕು ಹಂತಗಳಲ್ಲಿ ನಡೆಸಲಾಗಿತ್ತು.

ಐಐಟಿ ಸೇರುವ ಗುರಿ...

ಸದ್ಯ ಗೌರವ್‌ ದಾಸ್‌ ಕಂಪ್ಯೂಟರ್ ಎಂಜಿನಿಯರಿಂಗ್ ಪದವಿ ಪಡೆಯಲು ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯ ಸೇರಿಕೊಂಡಿದ್ದಾರೆ. ಆದರೆ, ಅವರು ಭಾರತದಲ್ಲಿ ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾರೆ. ಅಲ್ಲದೇ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸೇರುವ ಗುರಿ ಹೊಂದಿದ್ದಾರೆ.

10ನೇ ತರಗತಿ ತನಕ ಉತ್ತರ ಬೆಂಗಳೂರಿನಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯಲ್ಲಿ (ಡಿಪಿಎಸ್‌) ಅವರು ವಿದ್ಯಾಭ್ಯಾಸ ಮಾಡಿದ್ದಾರೆ. 11 ಮತ್ತು 12ನೇ ತರಗತಿಗೆ ನಾರಾಯಣ ಇ-ಟೆಕ್ನೋ ಸ್ಕೂಲ್‌ ಸೇರಿಕೊಂಡರು. ಗೌರವ್ ಅವರ ತಂದೆ ಗೌತಮ್‌ಕುಮಾರ್ ಅವರು ಶಿಕಾಗೋದಲ್ಲಿ ಯೋಜನಾ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ‘ಕೋವಿಡ್ ಸಂದರ್ಭದಲ್ಲಿ ತಂದೆಯಿಂದ ದೂರವಿದ್ದು ವ್ಯಾಸಂಗ ಮಾಡುವುದು ದೊಡ್ಡ ಸವಾಲಾಗಿತ್ತು. ನಿರಂತರ ಅಭ್ಯಾಸವೇ ಸಾಧನೆಗೆ ಸಹಾಯವಾಯಿತು’ ಎಂದು ಹೇಳಿದರು. ‘ತಾಯಿ ಬರ್ನಾಲಿ ದಾಸ್ ಅವರು ಶಾಲಾ ಶಿಕ್ಷಕಿಯಾಗಿದ್ದು, ಅವರ ಪ್ರೇರಣೆಯೂ ಈ ಸಾಧನೆಗೆ ಪ್ರಮುಖ ಕಾರಣ. ಸ್ವಂತ ಶಕ್ತಿಯಿಂದ ಅಧ್ಯಯನ ನಡೆಸಲು ಸಾಂಕ್ರಾಮಿಕ ರೋಗ ಸಹಾಯ ಮಾಡಿತು. ಆದರೆ, ಸ್ನೇಹಿತರು ಮತ್ತು ಶಿಕ್ಷಕರನ್ನು ಭೇಟಿಯಾಗದಂತೆ ಮಾಡಿತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.