ಪ್ರಾತಿನಿಧಿಕ ಚಿತ್ರ
ನವದೆಹಲಿ: ನಕಲಿ ದಾಖಲೆ ಸೇರಿದಂತೆ ಅನ್ಯಾಯದ ವಿಧಾನಗಳನ್ನು ಬಳಸಿ ಜೆಇಇ ಪರೀಕ್ಷೆ ಬರೆದ 110 ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹೇಳಿದೆ.
ಇಂದು(ಶನಿವಾರ) ಜೆಇಇ(ಮುಖ್ಯಪರೀಕ್ಷೆ) ಎರಡನೇ ಆವೃತ್ತಿಯ ಫಲಿತಾಂಶ ಪ್ರಕಟವಾಗಿದ್ದು, 24 ಅಭ್ಯರ್ಥಿಗಳು ಶೇ 100 ಅಂಕ ಗಳಿಸಿದ್ದಾರೆ.
‘ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸುವ ಸಲುವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಎಐ ಆಧಾರಿತ ವಿಡಿಯೊ ವಿಶ್ಲೇಷಣೆ, 5ಜಿ ನೆಟ್‌ವರ್ಕ್ ಜಾಮರ್‌ಗಳು, ಸಿಸಿಟಿವಿ ಕ್ಯಾಮೆರಾ, ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಸೇರಿದಂತೆ ಹಲವು ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಅದಾಗ್ಯೂ ಕೆಲ ಅಭ್ಯರ್ಥಿಗಳು ಅನ್ಯಾಯದ ಮಾರ್ಗ ಹಿಡಿದಿರುವುದು ಕಂಡುಬಂದಿದ್ದು, ಅಂತಹ 110 ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ’ ಎಂದು ಅದು ತಿಳಿಸಿದೆ.
‘ದಾಖಲಾತಿ ಪರಿಶೀಲನೆ ವೇಳೆ ವ್ಯತ್ಯಾಸ ಕಂಡುಬಂದ ಹಿನ್ನೆಲೆ ಇನ್ನೂ 23 ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ’ ಎಂದೂ ತಿಳಿಸಿದೆ
ರಾಜಸ್ಥಾನ ಹೆಚ್ಚಿನ ಟಾಪರ್‌ಗಳನ್ನು ಹೊಂದಿದ್ದು, 7 ಮಂದಿ ಶೇ 100 ಅಂಕ ಗಳಿಸಿದ್ದಾರೆ. ಉಳಿದಂತೆ ಮಹಾರಾಷ್ಟ್ರ ಮತ್ತು ತೆಲಂಗಾಣದ ತಲಾ ನಾಲ್ವರು ಅಭ್ಯರ್ಥಿಗಳು, ಉತ್ತರ ಪ್ರದೇಶದ ಮೂವರು, ಪಶ್ಚಿಮ ಬಂಗಾಳದ ಇಬ್ಬರು ಹಾಗೂ ಗುಜರಾತ್, ದೆಹಲಿ, ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ ತಲಾ ಒಬ್ಬರು ಪೂರ್ಣ ಅಂಕ ಗಳಿಸಿದ್ದಾರೆ.
ದೇಶದಾದ್ಯಂತ 10,61,840 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 9,92,350 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.