ADVERTISEMENT

ಜಮ್ಮು-ಕಾಶ್ಮೀರ: ಪುಲ್ವಾಮಾದಲ್ಲಿ ಉಗ್ರರ ಅಡಗುದಾಣ ಪತ್ತೆ; ಭಯೋತ್ಪಾದಕರ ಸಹಚರ ಬಂಧನ

ಪಿಟಿಐ
Published 28 ನವೆಂಬರ್ 2025, 13:29 IST
Last Updated 28 ನವೆಂಬರ್ 2025, 13:29 IST
   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆ, ಜೈಶ್–ಎ–ಮೊಹಮ್ಮದ್ (ಜೆಇಎಂ) ಸಂಘಟನೆಗೆ ಸೇರಿದ ಅಡಗುದಾಣವನ್ನು ಭೇದಿಸಿ, ಭಯೋತ್ಪಾದಕರಿಗೆ ನೆರವು ನೀಡುತ್ತಿದ್ದ ಸಹಚರನನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಯೋತ್ಪಾದಕ ಜಾಲ ವಿರುದ್ಧದ ಪ್ರಮುಖ ಯಶಸ್ಸಿನಲ್ಲಿ, ಅವಂತಿಪೋರಾದ ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಅಡಗುದಾಣವನ್ನು ಭೇದಿಸಿ, ಭಯೋತ್ಪಾದಕರ ಸಹಚರನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಬಂಧಿತ ಭಯೋತ್ಪಾದಕರ ಸಹಚರನು ಟ್ರಾಲ್ ಮತ್ತು ಅವಂತಿಪೋರಾ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆಇಎಂ ಭಯೋತ್ಪಾದಕರಿಗೆ ಲಾಜಿಸ್ಟಿಕ್ ಬೆಂಬಲ ಮತ್ತು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಸಾಗಣೆಗೆ ಅನುಕೂಲ ಮಾಡಿಕೊಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ ಎಂದು ಅವರು ಹೇಳಿದರು.

ADVERTISEMENT

ದಕ್ಷಿಣ ಕಾಶ್ಮೀರ ಜಿಲ್ಲೆಯ ನಾನೇರ್ ಮಿದೂರ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಆಧರಿಸಿ ಆ ಪ್ರದೇಶವನ್ನು ಸುತ್ತುವರಿದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು ಎಂದು ಅವರು ಮಾಹಿತಿ ನೀಡಿದ್ದಾರೆ.

ಶೋಧದ ಸಮಯದಲ್ಲಿ, ಜೆಇಎಂ ಜೊತೆ ಸಂಬಂಧ ಹೊಂದಿರುವ ಗನೈ ಮೊಹಲ್ಲಾದ ನಾನಾರ್ ನಿವಾಸಿ ನಜೀರ್ ಅಹ್ಮದ್ ಗನೈ ಎಂದು ಗುರುತಿಸಲಾದ ಭಯೋತ್ಪಾದಕರ ಸಹಚರನನ್ನು ಬಂಧಿಸಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ.

ನಿರಂತರ ವಿಚಾರಣೆಯ ಸಮಯದಲ್ಲಿ ಆತ ನೀಡಿದ ಮಾಹಿತಿ ಆಧರಿಸಿ, ಆರೋಪಿಗೆ ಸೇರಿದ ತೋಟದಲ್ಲಿ ಭಯೋತ್ಪಾದಕರ ಅಡಗುದಾಣವನ್ನು ಪತ್ತೆಹಚ್ಚಲಾಯಿತು ಎಂದು ಅವರು ಹೇಳಿದ್ದಾರೆ.

ಅಡಗುದಾಣದಿಂದ, ಭದ್ರತಾ ಪಡೆಗಳು ಎರಡು ಹ್ಯಾಂಡ್ ಗ್ರೆನೇಡ್‌ಗಳು, ಒಂದು ಡಿಟೊನೇಟರ್ ಮತ್ತು ಸ್ಫೋಟಕದಂತಹ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇವೆಲ್ಲವನ್ನೂ ಹೆಚ್ಚಿನ ವಿಶ್ಲೇಷಣೆಗಾಗಿ ವಶಪಡಿಸಿಕೊಳ್ಳಲಾಗಿದೆ. ಅಡಗುತಾಣವನ್ನು ನಾಶಪಡಿಸಲಾಗಿದೆ ಎಂದು ವಕ್ತಾರರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.