ADVERTISEMENT

ಕಂದಹಾರ್ ಸಂಚುಕೋರ ಯೂಸುಫ್ ಅಜರ್

ಬಾಲಕೋಟ್‌ನಲ್ಲಿ ಅತಿದೊಡ್ಡ ಉಗ್ರರ ತರಬೇತಿ ಶಿಬಿರ ನಡೆಸುತ್ತಿದ್ದ ಮಸೂದ್‌ನ ಬಾವ

ಪಿಟಿಐ
Published 26 ಫೆಬ್ರುವರಿ 2019, 19:34 IST
Last Updated 26 ಫೆಬ್ರುವರಿ 2019, 19:34 IST
ಯೂಸುಫ್ ಅಜರ್
ಯೂಸುಫ್ ಅಜರ್   

ನವದೆಹಲಿ: ಬಾಲಾಕೋಟ್‌ನಲ್ಲಿ ಜೈಷ್–ಎ–ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಶಿಬಿರದ ನೇತೃತ್ವ ವಹಿಸಿದ್ದ ಯೂಸುಫ್ ಅಜರ್‌, ಕಂದಹಾರ್ ವಿಮಾನ ಅಪಹರಣ ಪ್ರಕರಣದಲ್ಲಿ ಭಾರತಕ್ಕೆ ಬೇಕಿದ್ದ ಉಗ್ರ.

ಬಾಲಾಕೋಟ್‌ನ ಉಗ್ರರ ತರಬೇತಿ ಶಿಬಿರವು ಯೂಸುಫ್ ಅಜರ್ ಅಲಿಯಾಸ್ ಉಸ್ತಾದ್ ಘೌರಿಗೆ ಸೇರಿದ್ದು ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಜಯ ಗೋಖಲೆ ಹೇಳಿದ್ದಾರೆ. ಈತ ಜೈಷ್‌–ಎ–ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ನ ಬಾವ ಹಾಗೂನಿಕಟವರ್ತಿ. ಕರಾಚಿಯಲ್ಲಿ ಹುಟ್ಟಿರುವ ಯೂಸುಫ್, ಉರ್ದು ಹಾಗೂ ಹಿಂದಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲ.

ಕಠ್ಮಂಡುನಿಂದ ಕಂದಹಾರ್‌ಗೆ ತೆರಳುತ್ತಿದ್ದ ಭಾರತದ ಐಸಿ–814 ವಿಮಾನವನ್ನು 1999 ಡಿಸೆಂಬರ್ 24ರಂದು ಅಪಹರಿಸಿದ್ದ ಪ್ರಕರಣದಲ್ಲಿ ಸಿಬಿಐ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಅಜರ್ ಜೊತೆ ಇಬ್ರಾಹಿಂ ಅಥರ್, ಸನ್ನಿ ಅಹ್ಮದ್ ಖಾಜಿ, ಝಹೂರ್ ಇಬ್ರಾಹಿಂ, ಶಹೀದ್ ಅಖ್ತರ್, ಸಯೀದ್ ಶಕೀರ್, ಅಬ್ದುಲ್ ರವೂಫ್ ಎಂಬುವರ ವಿರುದ್ಧ ಪ್ರಕರಣ ಇದೆ.

ADVERTISEMENT

2000ರಲ್ಲಿ ಅಜರ್ ವಿರುದ್ಧ ಇಂಟರ್‌ಪೋಲ್ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು. ಅಜರ್ ಮತ್ತು ರವೂಫ್ ಅವರು ಕಂದಹಾರ್ ವಿಮಾನ ಅಪಹರಣ ಪ್ರಕರಣದ ಪ್ರಮುಖ ಸಂಚುಕೋರರು.

ಬಿಡುಗಡೆ:ವಿಮಾನದಲ್ಲಿದ್ದಲ್ಲಿ ಒತ್ತೆ ಇರಿಸಿಕೊಂಡಿದ್ದ 154 ಪ್ರಯಾಣಿಕರನ್ನು ಉಳಿಸಿಕೊಳ್ಳುವ ಸಲುವಾಗಿ ಅಂದಿನ ಎನ್‌ಡಿಎ ಸರ್ಕಾರವು ಮಸೂದ್ ಅಜರ್, ಮುಷ್ತಾಕ್ ಅಹ್ಮದ್ ಝಾರ್ಗರ್ ಮತ್ತು ಅಹ್ಮದ್ ಒಮರ್ ಸೈಯದ್ ಶೇಕ್ ಎಂಬ ಉಗ್ರರನ್ನು ಬಿಡುಗಡೆ ಮಾಡಿತ್ತು. ಅಂದಿನಿಂದಲೂ ಇವರನ್ನು ತನಗೆ ಒಪ್ಪಿಸುವಂತೆ ಪಾಕಿಸ್ತಾನಕ್ಕೆ ಭಾರತ ಕೇಳುತ್ತಿದೆ. ಆದರೆ ಪಾಕಿಸ್ತಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.