ADVERTISEMENT

ಜೆಟ್‌ ಏರ್‌ವೇಸ್ ಮುಷ್ಕರ ರದ್ದು: ಇಂದು ಸಭೆ

ಪಿಟಿಐ
Published 14 ಏಪ್ರಿಲ್ 2019, 20:15 IST
Last Updated 14 ಏಪ್ರಿಲ್ 2019, 20:15 IST
ಜೆಟ್‌ ಏರ್‌ವೇಸ್‌
ಜೆಟ್‌ ಏರ್‌ವೇಸ್‌   

ಮುಂಬೈ: ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ನ ಸಿಬ್ಬಂದಿ ಸೋಮವಾರ ಕರೆ ನೀಡಿದ್ದ ಮುಷ್ಕರವನ್ನು ಭಾನುವಾರ ರಾತ್ರಿ ಕೈಬಿಟ್ಟಿದ್ದಾರೆ.

ಸಂಸ್ಥೆಯ ಆಡಳಿತ ಮಂಡಳಿ ಮತ್ತು ಎಸ್‌ಬಿಐ ಮಧ್ಯೆ ಸೋಮವಾರ ಮಹತ್ವದ ಸಭೆ ನಡೆಯಲಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಜನವರಿಯಿಂದ ವೇತನ ಪಾವತಿ ಮಾಡದಿರುವುದನ್ನು ವಿರೋಧಿಸಿ ಪೈಲಟ್‌ ಮತ್ತು ಇತರ ಸಿಬ್ಬಂದಿ ಮುಷ್ಕರ ನಡೆಸುವುದಾಗಿ ತಿಳಿಸಿದ್ದರು. ಸಂಸ್ಥೆಯು ಈಗಾಗಲೇ ಹಲವಾರು ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಪಡಿಸಿದೆ. ಜೂನ್‌ 10ರವರೆಗೆ ಮುಂಗಡ ಟಿಕೆಟ್‌ ಕಾದಿರಿಸುವುದನ್ನೂ ಸ್ಥಗಿತಗೊಳಿಸಿದೆ. 120 ವಿಮಾನಗಳ ಪೈಕಿ ಕೇವಲ 7 ವಿಮಾನಗಳು ಹಾರಾಟ ನಡೆಸುತ್ತಿವೆ.

ADVERTISEMENT

ಸಂಸ್ಥೆಯ ಪಾಲು ಬಂಡವಾಳ ಮಾರಾಟಕ್ಕೆ ನಡೆಯುತ್ತಿರುವ ಹರಾಜಿನಲ್ಲಿ ಭಾಗವಹಿಸಿರುವ ಎತಿಹಾದ್‌ ಏರ್‌ವೇಸ್‌ ತನ್ನ ಪಾಲು ಬಂಡವಾಳವನ್ನು ಶೇ 24ರಿಂದ ಶೇ 75ರಷ್ಟಕ್ಕೆ ಹೆಚ್ಚಿಸಲು ಮುಂದಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಎರವಾಗಿರುವ ಸಂಸ್ಥೆಯ ಸ್ಥಾಪಕ ನರೇಶ್‌ ಗೋಯಲ್‌ ಅವರೂ ಬಿಡ್‌ನಲ್ಲಿ ಭಾಗಿಯಾಗಿದ್ದಾರೆ.

ಮಾರ್ಚ್‌ ತಿಂಗಳಿನಲ್ಲಿ ಪ್ರಕಟಿಸಲಾದ ಸಾಲ ಹೊಂದಾಣಿಕೆಯಡಿ ಬ್ಯಾಂಕ್‌ ಒಕ್ಕೂಟದಿಂದ ಸಂಸ್ಥೆಗೆ ಬರಬೇಕಾದ ₹ 1,500 ಕೋಟಿ ಬಂಡವಾಳದ ನೆರವು ಇದುವರೆಗೂ ಕಾರ್ಯಗತಗೊಂಡಿಲ್ಲ.

ರಾಜೀನಾಮೆ: ಸಂಸ್ಥೆಯ ಸ್ವತಂತ್ರ ನಿರ್ದೇಶಕಿ ರಾಜಶ್ರೀ ಪಾಥಿ ಅವರು ಇತರ ಕೆಲಸಗಳ ಒತ್ತಡಗಳ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.