ADVERTISEMENT

ಜೆಟ್‌ ಏರ್‌ವೇಸ್‌ ಸೇವೆ ತಾತ್ಕಾಲಿಕ ಸ್ಥಗಿತ

ಕೊನೆಕ್ಷಣದಲ್ಲಿ ಬಾರದ ₹ 400 ಕೋಟಿ ನೆರವು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 20:06 IST
Last Updated 17 ಏಪ್ರಿಲ್ 2019, 20:06 IST
ಜೆಟ್‌ ಏರ್‌ವೇಸ್‌
ಜೆಟ್‌ ಏರ್‌ವೇಸ್‌   

ಮುಂಬೈ: ಇಪ್ಪತ್ತೈದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌, ಹಣಕಾಸು ಬಿಕ್ಕಟ್ಟಿನ ಕಾರಣಕ್ಕೆ ಬುಧವಾರ ರಾತ್ರಿಯಿಂದಲೇ ತನ್ನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ.

‘ತಕ್ಷಣದಿಂದಲೇ ಜಾರಿಗೆ ಬರುವಂತೆ ನಾವು ನಮ್ಮೆಲ್ಲ ಅಂತರರಾಷ್ಟ್ರೀಯ ಮತ್ತು ದೇಶಿ ವಿಮಾನಗಳ ಹಾರಾಟವನ್ನು ರದ್ದು ಮಾಡಿದ್ದೇವೆ. ಬ್ಯಾಂಕ್‌ಗಳ ಒಕ್ಕೂಟ ಅಥವಾ ಇತರ ಮೂಲಗಳಿಂದ ಹಣಕಾಸಿನ ನೆರವು ದೊರೆತಿಲ್ಲ. ಹೀಗಾಗಿ ಇಂಧನ ಮತ್ತಿತರ ಸೇವೆಗಳಿಗೆ ಹಣ ಪಾವತಿಸಲು ಸಾಧ್ಯವಾಗಿಲ್ಲ. ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಲಾಗುತ್ತಿದೆ’ ಎಂದು ಸಂಸ್ಥೆಯು ಮುಂಬೈ ಷೇರುಪೇಟೆಗೆ ತಿಳಿಸಿದೆ.

ತುರ್ತಾಗಿ ₹ 400 ಕೋಟಿ ನೆರವು ನೀಡಬೇಕೆಂಬ ಸಂಸ್ಥೆಯ ಮೊರೆಯನ್ನು ಬ್ಯಾಂಕ್‌ಗಳು ತಳ್ಳಿ ಹಾಕಿವೆ. ಜನವರಿಯಿಂದೀಚೆಗೆ ಸಾಲದ ಬಿಕ್ಕಟ್ಟಿನಿಂದ ಪಾರಾಗುವ ಬಗ್ಗೆ ಆಶಾವಾದ ಹೊಂದಿದ್ದ, ಆದರೆ ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನವನ್ನೇನೂ ಮಾಡದಿದ್ದ ಸಂಸ್ಥೆಯ ಮುಂದೆ ಸೇವೆ ರದ್ದುಮಾಡದೇ ಬೇರೆ ಆಯ್ಕೆಗಳೇ ಉಳಿದಿರಲಿಲ್ಲ.

ADVERTISEMENT

ತಟಸ್ಥ ನಿಲುವು: ಸಂಸ್ಥೆಯ ವ್ಯವಹಾರದಲ್ಲಿ ಮಧ್ಯಪ್ರವೇಶ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬ್ಯಾಂಕ್‌ಗಳು ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಬೇಕು ಎನ್ನುವುದು ಸರ್ಕಾರದ ನಿಲುವಾಗಿದೆ ಎಂದು ಮೂಲಗಳು ತಿಳಿಸಿವೆ.

ತುರ್ತಾಗಿ ಹಣಕಾಸಿನ ನೆರವು ಬಿಡುಗಡೆ ಮಾಡಲು ಬ್ಯಾಂಕ್‌ಗಳಿಗೆ ಮನವಿ ಮಾಡಿಕೊಂಡ ನಂತರ ಅದಕ್ಕೆ ಸೂಕ್ತ ಪ್ರತಿಕ್ರಿಯೆ ಸಿಗದಿದ್ದರೆ ವಿಮಾನಗಳ ಹಾರಾಟ ರದ್ದುಪಡಿಸುವ ನಿರ್ಧಾರ ಪ್ರಕಟಿಸಲು ಸಂಸ್ಥೆಯ ನಿರ್ದೇಶಕ ಮಂಡಳಿಯು ಸಿಒಇ ವಿನಯ್‌ ದುಬೆ ಅವರಿಗೆ ಅಧಿಕಾರ ನೀಡಿತ್ತು. ಸಂಸ್ಥೆಯು ₹ 8 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಸಾಲದ ಸುಳಿಗೆ ಸಿಲುಕಿಕೊಂಡಿದೆ.

ಫಲ ನೀಡದ ಸೂತ್ರ: ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ಮಾರ್ಚ್‌ 25ರಂದು ಸಾಲ ಹೊಂದಾಣಿಕೆ ಸೂತ್ರ ಸಿದ್ಧಪಡಿಸಿದೆ. ಸಂಸ್ಥೆಯಲ್ಲಿನ ಪಾಲು ಬಂಡವಾಳವನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಸೂತ್ರ ಇನ್ನೂ ಫಲ ನೀಡಿಲ್ಲ.

ದುಬಾರಿ ಪ್ರಯಾಣ
ಅಮೆರಿಕದಿಂದ ಭಾರತಕ್ಕೆ ಬರಲು ಜೆಟ್‌ ಏರ್‌ವೇಸ್‌ ನೆಚ್ಚಿಕೊಂಡಿರುವ ಪ್ರಯಾಣಿಕರು ದುಬಾರಿ ಪ್ರಯಾಣ ದರ ಪಾವತಿಸುವ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎರಡು ಮೂರು ತಿಂಗಳು ಮೊದಲೇ ಟಿಕೆಟ್‌ ಬುಕಿಂಗ್‌ ಮಾಡಿದವರು, ಈಗ ಉದ್ಭವಿಸಿರುವ ಬಿಕ್ಕಟ್ಟಿನಿಂದಾಗಿ ತಮ್ಮದಲ್ಲದ ತಪ್ಪಿಗೆ ಹೆಚ್ಚಿನ ದರ ಪಾವತಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಪ್ರಯಾಣಿಕರಿಗೆ ಕೊನೆ ಗಳಿಗೆವರೆಗೂ ಸರಿಯಾದ ಮಾಹಿತಿಯನ್ನೂ ನೀಡದ ಸಂಸ್ಥೆಯ ವರ್ತನೆ ಕಂಡು ಅನೇಕರು ರೋಸಿಹೋಗಿದ್ದಾರೆ.

ಪ್ರಯಾಣ ಆರಂಭಿಸುವುದಕ್ಕೂ ಸಾಕಷ್ಟು ಮುಂಚಿತವಾಗಿ ವಿಮಾನ ರದ್ದಾಗಿರುವುದನ್ನು ಪ್ರಕಟಿಸಿದರೆ, ಅದಕ್ಕೆ ವಿಮಾನ ಯಾನ ಸಂಸ್ಥೆಯೇ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ. ಆದರೆ, ಭಾರತಕ್ಕೆ ಮರಳುವ ಮಾರ್ಗ ಮಧ್ಯೆ ವಿಮಾನ ಬದಲಿಸುವ ಸಂದರ್ಭದಲ್ಲಿ ವಿಮಾನ ರದ್ದಾಗಿರುವುದನ್ನು ಕೆಲ ದಿನಗಳಿಂದ ಹಠಾತ್ತಾಗಿ ಘೋಷಿಸಲಾಗುತ್ತಿದೆ. ಇದರಿಂದ ಗಲಿಬಿಲಿಗೆ ಒಳಗಾಗುವ ಪ್ರಯಾಣಿಕರು ಅನಿವಾರ್ಯವಾಗಿ ದುಬಾರಿ ಬೆಲೆ ತೆತ್ತು ಇತರ ಸಂಸ್ಥೆಗಳ ವಿಮಾನ ಏರಿ ತಾಯ್ನಾಡಿಗೆ ಮರಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.