ಸಾಂದರ್ಭಿಕ ಚಿತ್ರ
ಲಖನೌ/ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಭವಿಸಿದ್ದ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿ ಕಾಲೇಜು ಪ್ರಾಂಶುಪಾಲರು ಸೇರಿ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ.
ಪ್ರಕರಣ ಕುರಿತು ಮೂರು ಹಂತದ ತನಿಖೆ ನಡೆಸುವಂತೆ ಈಚೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಜತೆಗೆ, ವೈದ್ಯಕೀಯ ಶಿಕ್ಷಣ ಮತ್ತು ತರಬೇತಿಯ ಮಹಾ ನಿರ್ದೇಶಕರ ನೇತೃತ್ವದಲ್ಲಿ ನಾಲ್ವರ ಸಮಿತಿಯನ್ನು ರಚಿಸಿದ್ದು, ಬೆಂಕಿ ಅವಘಡಕ್ಕೆ ಕಾರಣವನ್ನು ತಿಳಿಯಲು ಹಾಗೂ ಘಟನೆಯ ಹಿಂದೆ ನಿರ್ಲಕ್ಷ್ಯವಿದೆಯೇ ಎಂಬ ಕುರಿತು ತನಿಖೆ ನಡೆಸಿ ಏಳು ದಿನಗಳ ಒಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಿತ್ತು.
ಇದೀಗ ಸಮಿತಿ ತನ್ನ ವರದಿಯನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಝಾನ್ಸಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ಆರೋಗ್ಯ ಸಚಿವ, ಉಪ ಮುಖ್ಯಮಂತ್ರಿಯೂ ಆಗಿರುವ ಬ್ರಿಜೇಶ್ ಪಾಠಕ್ ಅವರು ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
ಸಮಿತಿಯ ವರದಿಯ ಆಧಾರದ ಮೇಲೆ ಕಾಲೇಜು ಪ್ರಾಂಶುಪಾಲ ಡಾ. ನರೇಂದ್ರ ಸಿಂಗ್ ಸೆಂಗಾರ್, ಮುಖ್ಯ ಅಧೀಕ್ಷಕಿ ಡಾ.ಸುನೀತಾ ರಾಥೋಡ್, ಜೂನಿಯರ್ ಎಂಜಿನಿಯರ್ ಸಂಜೀತ್ ಕುಮಾರ್ ಮತ್ತು ಎನ್‌ಐಸಿಯು ವಾರ್ಡ್‌ನ ಸಂಧ್ಯಾ ರೈ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನವೆಂಬರ್ 15ರ ತಡರಾತ್ರಿ ‘ನವಜಾತ ಶಿಶುಗಳ ತೀವ್ರ ನಿಗಾ ಘಟಕ’ದಲ್ಲಿ (ಎನ್ಐಸಿಯು) ಬೆಂಕಿ ಹೊತ್ತಿಕೊಂಡಿತ್ತು. ಅವಘಡದಲ್ಲಿ 18 ಶಿಶುಗಳು ಮೃತಪಟ್ಟದ್ದವು. ಘಟನೆ ಸಂಭವಿಸಿದಾಗ ಮಕ್ಕಳ ವಾರ್ಡ್‌ನಲ್ಲಿ 55 ಶಿಶುಗಳು ಚಿಕಿತ್ಸೆ ಪಡೆಯುತ್ತಿದ್ದವು ಎಂದು ವರದಿಯಾಗಿತ್ತು. ಆದರೆ 49 ಶಿಶುಗಳು ಮಾತ್ರ ದಾಖಲಾಗಿದ್ದವು ಎಂದು ಆಸ್ಪತ್ರೆಯ ಆಡಳಿತ ವಿಭಾಗ ಸ್ಪಷ್ಟನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.