ಜಾರ್ಖಂಡ್ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಅವರ ಕಿರಿಯ ಮಗ ಕ್ರಿಶ್ ಅನ್ಸಾರಿ ರಾಂಚಿಯ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದರು.
Credit: X/@ajaysahspeaks
ರಾಂಚಿ: ಜಾರ್ಖಂಡ್ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಅವರ ಕಿರಿಯ ಮಗ 19 ವರ್ಷದ ಕ್ರಿಶ್ ಅನ್ಸಾರಿ ರಾಂಚಿಯ ಆಸ್ಪತ್ರೆಯೊಂದರಲ್ಲಿ ಪರಿಶೀಲನೆ ನಡೆಸುವುದರ ಜತೆಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳೊಂದಿಗೆ ಮಾತನಾಡುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಇದೇ ವಿಚಾರ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಇತ್ತ ಮಗನ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಇರ್ಫಾನ್ ಅನ್ಸಾರಿ, ‘ವಿದ್ಯಾರ್ಥಿಯಾಗಿರುವ ಕ್ರಿಶ್ ಪ್ರಸ್ತುತ ರಜೆಯಲ್ಲಿದ್ದಾನೆ. ಅಪ್ಪ, ಜನರಿಗೆ ಸಹಾಯ ಮಾಡುವುದು ಅಪರಾಧವೇ? ಎಂದು ಆತ ಪದೇ ಪದೇ ನನ್ನನ್ನು ಪ್ರಶ್ನಿಸುತ್ತಿದ್ದ. ನನ್ನ ಮಗ ಯಾವುದೇ ಅಪರಾಧ ಮಾಡಿಲ್ಲ. ದುರಹಂಕಾರ ಅಥವಾ ಅಧಿಕಾರದ ಮದದಿಂದ ವರ್ತಿಸಿಲ್ಲ. ಬದಲಾಗಿ ಕಷ್ಟದಲ್ಲಿರುವವರನ್ನು ಕಂಡು ಕರುಣೆ ತೋರುವ ಕೆಲಸ ಮಾಡಿದ್ದೇನೆ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ‘ಜಾರ್ಖಂಡ್‌ನ ರೀಲ್ ಸಚಿವರ ಮಗ ಕೂಡಾ ಸರ್ಕಾರಿ ಆಸ್ಪತ್ರೆಗಳನ್ನು ಪರಿಶೀಲಿಸಲು ಮತ್ತು ರೀಲ್ಸ್ ಮಾಡಲು ಆರಂಭಿಸಿದ್ದಾನೆ. ಈತ (ಕ್ರಿಶ್ ಅನ್ಸಾರಿ) ಆಸ್ಪತ್ರೆಗೆ ಭೇಟಿ ನೀಡುವ ಮತ್ತು ಪರಿಶೀಲನೆ ನಡೆಸಲು ಯಾವ ಹಕ್ಕು ಮತ್ತು ಅಧಿಕಾರವನ್ನು ಹೊಂದಿದ್ದಾನೆ’ ಎಂದು ಕಟುವಾಗಿ ಟೀಕಿಸಿದೆ.
ಕ್ರಿಶ್ ಅನ್ಸಾರಿ ತನ್ನ ಅಂಗರಕ್ಷಕ ಮತ್ತು ಕೆಲವು ಸ್ನೇಹಿತರೊಂದಿಗೆ ತೆರಳಿ ಆಸ್ಪತ್ರೆಯಲ್ಲಿ ದಾಖಲಾದ ಕೆಲವು ರೋಗಿಗಳೊಂದಿಗೆ ಮಾತನಾಡುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಜತೆಗೆ, ಏನಾದರೂ ಸಮಸ್ಯೆಗಳಿದ್ದರೆ, ಸಚಿವರ ಮಗ ಇಲ್ಲೇ ಇದ್ದಾನೆ. ನೀವು ಆತನ ಗಮನಕ್ಕೆ ತರಬಹುದೆಂದು ಕ್ರಿಶ್ ಸ್ನೇಹಿತನೊಬ್ಬ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.