ADVERTISEMENT

ನಗರಗಳ ಸ್ವಚ್ಛತೆಗೆ ‘ಮಿಷನ್‌ ಅಮೃತ’: ಪ್ರಧಾನಿ ಮೋದಿ ಘೋಷಣೆ

ಸ್ವಚ್ಛ ಭಾರತ ಅಭಿಯಾನದ ಮುಂದಿನ ಹೆಜ್ಜೆ ಎಂದ ಪ್ರಧಾನಿ ಮೋದಿ

ಪಿಟಿಐ
Published 2 ಅಕ್ಟೋಬರ್ 2024, 15:18 IST
Last Updated 2 ಅಕ್ಟೋಬರ್ 2024, 15:18 IST
ಪ್ರಧಾನಿ ಮೋದಿ
ಪ್ರಧಾನಿ ಮೋದಿ   

ನವದೆಹಲಿ: ‘ಸ್ವಚ್ಛ ಭಾರತ’ ಅಭಿಯಾನಕ್ಕೆ 10 ವರ್ಷ ತುಂಬಿದ ಸಂದರ್ಭದಲ್ಲಿ ಈ ಅಭಿಯಾನದ ಮುಂದಿನ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ‘ಮಿಷನ್‌ ಅಮೃತ’ ಯೋಜನೆಯನ್ನು ಘೋಷಿಸಿದರು.

‘ಮಿಷನ್‌ ಅಮೃತ’ ಯೋಜನೆಯ ಮೂಲಕ ದೇಶದಾದ್ಯಂತ ಇರುವ ನಗರಗಳಲ್ಲಿನ ಕೊಳಚೆ ನೀರಿನ ಶುದ್ಧೀಕರಣ ಘಟಕವನ್ನು ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ಎರಡು ಭಾಗಗಳಿರಲಿವೆ. ಒಂದು ‘ಅಮೃತ’ ಮತ್ತೊಂದು ‘ಅಮೃತ 2.0’. ಇದಕ್ಕಾಗಿ ₹6,800 ಕೋಟಿ ಮೀಸಲಿಡಲಾಗಿದೆ’ ಎಂದು ಪ್ರಧಾನಿ ಮೋದಿ ತಿಳಿಸಿದರು.

‘ದೇಶದ 60 ಸಾವಿರದಿಂದ 70 ಸಾವಿರ ಮಕ್ಕಳ ಜೀವವನ್ನು ಸ್ವಚ್ಛ ಭಾರತ ಯೋಜನೆಯು ಉಳಿಸಿದೆ ಎಂದು ಅಂತರರಾಷ್ಟ್ರೀಯ ವರದಿಯೊಂದು ಹೇಳಿದೆ. ಜೊತೆಗೆ, ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗಿರುವ ಕಾರಣ ಭಾರತದ ಶೇ 90ರಷ್ಟು ಮಹಿಳೆಯರು ‘ತಾವು ಸುರಕ್ಷಿತ’ ಎಂಬ ಭಾವನೆ ತಳೆದಿದ್ದಾರೆ ಎಂದು ಯುನಿಸೆಫ್‌ನ ವರದಿ ಹೇಳಿದೆ’ ಎಂದು ಸ್ವಚ್ಛ ಭಾರತ ಯೋಜನೆಯನ್ನು ಪ್ರಧಾನಿ ಶ್ಲಾಘಿಸಿದರು.

ADVERTISEMENT

‘ದೇಶದಲ್ಲಿ ಸ್ವಚ್ಛತೆ ಮೂಡಿರುವುದರಿಂದ ಡಯೇರಿಯಾ ರೋಗದಿಂದ ಮೃತಪಡುತ್ತಿದ್ದವರ ಸಂಖ್ಯೆ ಇಳಿಕೆಯಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, 2014ರಿಂದ 2019ರವರೆಗೆ ಸುಮಾರು 3 ಲಕ್ಷ ಜೀವಗಳು ಉಳಿದಿವೆ’ ಎಂದು ಮೋದಿ ಹೇಳಿದರು.

‘ಮಲಗುಂಡಿ ಸ್ವಚ್ಛತೆಯಿಂದಾಗಿ ಎದುರಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಸ್ವಚ್ಛತೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಈ ತಂತ್ರಜ್ಞಾನ ಅಭಿವೃದ್ಧಿಗಾಗಿ ಸುಮಾರು 5 ಸಾವಿರ ಸ್ಟಾರ್ಟ್‌ಅಪ್‌ ಕಂಪನಿಗಳು ನೋಂದಾಯಿಸಿಕೊಂಡಿವೆ’ ಎಂದರು.

‘ನಮಾಮಿ ಗಂಗೆ’ ಯೋಜನೆ ಅಡಿಯಲ್ಲಿ ಗಂಗಾ ನದಿ ತೀರದ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸ್ವಚ್ಛತೆ ಹಾಗೂ ತಾಜ್ಯ ನಿರ್ವಹಣೆಗಾಗಿ ₹1,500 ಕೋಟಿ ಹಾಗೂ ‘ಗೋಬರ್‌ಧನ ಯೋಜನೆ’ ಅಡಿಯಲ್ಲಿ 15 ಸಾಂದ್ರೀಕೃತ ಜೈವಿಕ ಅನಿಲ (ಸಿಬಿಜಿ) ಘಟಕ ಸ್ಥಾಪನೆಗೆ ₹1,332 ಕೋಟಿ ಅನುದಾನ ನೀಡುವುದಾಗಿ ಇದೇ ಸಮಾರಂಭದಲ್ಲಿ ಪ್ರಧಾನಿ ಘೋಷಿಸಿದರು.

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನಡೆದ ಪರಿವರ್ತಾ ಯಾತ್ರೆಯ ಸಮಾರೋಪ ಕಾರ್ಯಕ್ರಮಕ್ಕೆ ತೆರೆದ ವಿಷೇಶ ವಾಹನದಲ್ಲಿ ಆಗಮಿಸಿದ ಪ್ರಧಾನಿ ಮೋದಿ. ಜಾರ್ಖಂಡ್‌ನ ಬಿಜೆಪಿ ಅಧ್ಯಕ್ಷ ಬಾಬುಲಾಲ್‌ ಮರಂಡಿ ಅವರು ಜೊತೆಯಿದ್ದರು

ಗಾಂಧಿ ಜಯಂತಿ ಅಂಗವಾಗಿ ‍ನವದೆಹಲಿಯ ಶಾಲೆಯೊಂದರಲ್ಲಿ ಪ್ರಧಾನಿ ಮೋದಿ ಅವರು ವಿದ್ಯಾರ್ಥಿನಿಯರೊಂದಿಗೆ ಸ್ವಚ್ಛಾತ ಕಾರ್ಯ ನಡೆಸಿದರು

ಸ್ವಚ್ಛತೆ ಕ್ಷೇತ್ರವು ದೇಶದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಅದು ಕಸದಿಂದ ರಸ ಮಾಡುವುದಿರಬಹುದು ತಾಜ್ಯದ ಸಂಗ್ರಹ ಅಥವಾ ಸಾಗಣೆ ಇರಬಹುದು ತಾಜ್ಯ ಮರುಬಳಕೆ ಇರಬಹುದು
ನರೇಂದ್ರ ಮೋದಿ ಪ್ರಧಾನಿ

‘ಹಿಂದೂ ಆದಿವಾಸಿಗಳ ಜನಸಂಖ್ಯೆ ಇಳಿಮುಖ’

ಹಜಾರಿಬಾಗ್‌: ‘ಜಾರ್ಖಂಡ್‌ನಲ್ಲಿ ಹಿಂದೂಗಳ ಹಾಗೂ ಆದಿವಾಸಿಗಳ ಜನಸಂಖ್ಯೆಯು ಕ್ಷೀಣಿಸುತ್ತಿದೆ’ ಎಂದು ಪ್ರಧಾನಿ ಮೋದಿ ಹೇಳಿದರು. ಇಲ್ಲಿ ನಡೆದ ಬಿಜೆಪಿಯ ‘ಪರಿವರ್ತನಾ ಯಾತ್ರೆ’ಯ ಸಮಾರೋಪದಲ್ಲಿ ಭಾಗವಹಿಸಿದ ಅವರು ‘ರಾಜ್ಯದ ಸಂಸ್ಕೃತಿ ಪರಂಪರೆ ಹಾಗೂ ಅಸ್ಮಿತೆಯನ್ನು ಪಣಕ್ಕಿಟ್ಟು ನುಸುಳುಕೋರರಿಗೆ ಬೆಂಬಲ ನೀಡುವಂಥ ಆತಂಕಕಾರಿ ‘ವೋಟ್‌ ಬ್ಯಾಂಕ್‌’ ರಾಜಕಾರಣವನ್ನು ಜೆಎಂಎಂ ಮೈತ್ರಿ ಸರ್ಕಾರ ಮಾಡುತ್ತಿದೆ’ ಎಂದು ದೂರಿದರು. ‘ಇದೇ ಕಾರಣಕ್ಕಾಗಿಯೇ ಜಾರ್ಖಂಡ್‌ನಲ್ಲಿ ಹಿಂದೂಗಳ ಹಾಗೂ ಆದಿವಾಸಿಗಳ ಜನಸಂಖ್ಯೆ ಕಡಿಮೆ ಆಗುತ್ತಿದೆ. ಮಾಟಿ ಬೇಟಿ ರೋಟಿಯನ್ನು (ಮಣ್ಣು ಮಗಳು ರೊಟ್ಟಿ) ರಕ್ಷಿಸಿಕೊಳ್ಳಲು ‘ಇಂಥ ಶಕ್ತಿಯನ್ನು ತೊಲಗಿಸುವ’ ಕಾಲ ಸನ್ನಿಹಿತವಾಗಿದೆ. ರಾಜ್ಯದಲ್ಲಿ ಪರಿವರ್ತನೆ ತರಲು ಇದು ಸಕಾಲ’ ಎಂದು ಕರೆ ನೀಡಿದರು. ಜಾರ್ಖಂಡ್‌ನಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಇದಕ್ಕಾಗಿ ಬಿಜೆಪಿಯು ಈ ಯಾತ್ರೆಯನ್ನು ಆರಂಭಿಸಿತ್ತು. ರಾಜ್ಯದ 81 ವಿಧಾನಸಭಾ ಕ್ಷೇತ್ರಗಳನ್ನು ಸುತ್ತಿ ಸುಮಾರು 5400 ಕೀ.ಮೀ ವ್ಯಾಪ್ತಿಯಲ್ಲಿ ಈ ಯಾತ್ರೆ ನಡೆದಿತ್ತು. ಈ ಎಲ್ಲ ಪ್ರದೇಶಗಳಿಂದ ಹೊತ್ತು ತಂದಿದ್ದ ಮಣ್ಣನ್ನು ಮಹಿಳೆಯರು ಕಳಶವೊಂದರಲ್ಲಿ ತುಂಬಿ ತಂದಿದ್ದರು. ಈ ಕಳಶವನ್ನು ಪ್ರಧಾನಿ ಮೋದಿ ಅವರಿಗೆ ನೀಡಿದರು. ‘ಮಣ್ಣು ಮಗಳು ರೊಟ್ಟಿ’ಯನ್ನು ರಕ್ಷಿಸುವುದಾಗಿ ಭರವಸೆ ನೀಡುವುದರ ಸಂಕೇತವಾಗಿ ಕಳಶ ನೀಡಲಾಯಿತು.

₹83700 ಕೋಟಿ ಮೊತ್ತದ ಯೋಜನೆ ಘೋಷಣೆ

ಇದೇ ವೇಳೆ ಜಾರ್ಖಂಡ್‌ನ ಅಭಿವೃದ್ಧಿಗಾಗಿ ₹83700 ಕೋಟಿ ಮೊತ್ತದ ಹಲವು ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಜೊತೆಗೆ ಆದಿವಾಸಿಗಳ ಸಮಗ್ರ ಅಭಿವೃದ್ಧಿಗಾಗಿ ₹79150 ಕೋಟಿ ಮೊತ್ತದ ‘ಧಾತ್ರಿ ಆಬಾ ಜನಜಾತೀಯ ಗ್ರಾಮ ಉತ್ಕರ್ಶ್‌ ಅಭಿಯಾನ’ ಯೋಜನೆಯನ್ನೂ ಅವರು ಘೋಷಿಸಿದರು. ‘ಮಹಾತ್ಮ ಗಾಂಧಿ ಅವರ ಆದಿವಾಸಿಗಳ ಅಭಿವೃದ್ಧಿಯ ದೃಷ್ಟಿಕೋನವೇ ‘ನಮ್ಮ ಆಸ್ತಿ’. ಬಿಜೆಪಿಯು ಆದಿವಾಸಿಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುತ್ತದೆ. ದೇಶದ ಆದಿವಾಸಿಗಳ ಕುಗ್ರಾಮಗಳನ್ನೂ ಅಭಿವೃದ್ದಿಯ ಬೆಳಕು ತಲುಪಿದೆ’ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು. ‘ಸುಮಾರು 5 ಕೋಟಿ ಆದಿವಾಸಿಗಳಿಗೆ ಈ ಯೋಜನೆಗಳ ಲಾಭ ದೊರೆಯಲಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.