ರಾಂಚಿ: ಜಾರ್ಖಂಡ್ ಸರ್ಕಾರವು ಬಹುಕೋಟಿ ವೆಚ್ಚದ ಆಸ್ಪತ್ರೆಯನ್ನು ನಿರ್ಮಿಸಲು ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು, ಇದರ ವಿರುದ್ದ ಬುಡಕಟ್ಟು ಸಮುದಾಯಗಳು ಪ್ರತಿಭಟನೆ ನಡೆಸುತ್ತಿವೆ.
ಬುಡಕಟ್ಟು ಸಮುದಾಯಗಳ ಪ್ರತಿಭಟನೆಗೆ ಬೆಂಬಲ ನೀಡುವುದಾಗಿ ಬಿಜೆಪಿ ನಾಯಕ ಹಾಗೂ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಅವರು ಘೋಷಿಸಿದ್ದರು.
‘ಬುಡಕಟ್ಟು ಸಮುದಾಯಗಳ ಪ್ರತಿಭಟನೆಗೆ ನಾನು ಬೆಂಬಲ ನೀಡಿದಕ್ಕಾಗಿ ನನ್ನನ್ನು ಗೃಹ ಬಂಧನದಲ್ಲಿ ಇರಿಸಿರುವುದು ಅಸಂವಿಧಾನಿಕವಾಗಿದೆ. ನಾನು ಹೇಗಾದರೂ ಮಾಡಿ ಪ್ರತಿಭಟನೆಗೆ ಸೇರಿಕೊಳ್ಳುತ್ತೇನೆ’ ಎಂದು ಚಂಪೈ ಸೊರೇನ್ ಹೇಳಿದ್ದಾರೆ.
ರಾಜ್ಯದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಚಂಪೈ ಸೊರೇನ್ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಬುಡಕಟ್ಟು ಜನರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದನ್ನು ವಿರೋಧಿಸಿ ರಾಂಚಿ ಕಡೆಗೆ ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದ ಚಂಪೈ ಸೊರೇನ್ ಅವರ ಮಗ ಬಾಬುಲಾಲ್ ಸೊರೇನ್ ಹಾಗೂ ಅವರ ಬೆಂಬಲಿಗರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಾರ್ಖಂಡ್ ಸರ್ಕಾರವು ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು(ಆರ್‌ಐಎಂಎಸ್) ವಿಸ್ತರಿಸುವ ಉದ್ದೇಶದಿಂದ ₹ 1,074 ಕೋಟಿ ವೆಚ್ಚದಲ್ಲಿ ಆರ್‌ಐಎಂಎಸ್–2 ಯೋಜನೆ ಕೈಗೊಂಡಿದೆ. 2,600 ಹಾಸಿಗೆಗಳ ಆಸ್ಪತ್ರೆಗೆ ಯೋಜನೆ ರೂಪಿಸಿದ್ದು, ಇದಕ್ಕಾಗಿ ನಗ್ರಿ ಪ್ರದೇಶದಲ್ಲಿ 207 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.
ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವುದರ ವಿರುದ್ಧ 20 ಕ್ಕೂ ಅಧಿಕ ಬುಡಕಟ್ಟು ಸಮುದಾಯಗಳು, ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆಯನ್ನು ಹತ್ತಿಕ್ಕಲು ಹೆಚ್ಚಿನ ಪೊಲೀಸ್ ಪಡೆ ನೇಮಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗ್ರಿ ಪ್ರದೇಶದಲ್ಲಿ ಸಾರ್ವಜನಿಕ ಸಭೆ ಮತ್ತು ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸಲಾಗಿದೆ ಎಂದು ರಾಂಚಿ ಜಿಲ್ಲಾಡಳಿತ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.