ಶ್ರೀನಗರ: ಜಮ್ಮು–ಕಾಶ್ಮೀರದಲ್ಲಿ ಕೆಲ ಮತಾಂಧ ಧರ್ಮಗುರುಗಳು ಇಸ್ಲಾಂ ತತ್ವಗಳನ್ನು ತಿರುಚಿ ಬೋಧಿಸುವ ಮೂಲಕ ಯುವ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ. ಅದರಲ್ಲೂ, ಖಾಸಗಿ ಶಾಲೆಗಳಲ್ಲಿನ ಬಾಲಕಿಯರನ್ನು ತೀವ್ರಗಾಮಿಗಳನ್ನಾಗಿ ಮಾಡಲಾಗುತ್ತಿದೆ. ಮಾಜಿ ಪ್ರತ್ಯೇಕತಾವಾದಿಗಳಲ್ಲಿಯೂ ಈ ಬೆಳವಣಿಗೆ ದಿಗಿಲು ಮೂಡಿಸಿದೆ ಎಂದು ಮೂಲಗಳು ಹೇಳಿವೆ.
ಈ ಬೆಳವಣಿಗೆ ಜಮ್ಮು–ಕಾಶ್ಮೀರದಲ್ಲಿ ಮತ್ತೊಂದು ಧಾರ್ಮಿಕ ಉಗ್ರವಾದದ ಅಲೆ ಏಳಲು ಕಾರಣವಾಗುತ್ತಿದೆಯೇ ಎಂಬ ಆತಂಕವನ್ನು ಕೂಡ ಮಾಜಿ ಪ್ರತ್ಯೇಕತಾವಾದಿಗಳು ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಂದೆಡೆ, ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ, ವಿಶೇಷವಾಗಿ ಖಾಸಗಿ ಶಾಲೆಗಳ ಬಾಲಕಿಯರನ್ನು ತೀವ್ರಗಾಮಿಗಳನ್ನಾಗಿ ಮಾಡಲಾಗುತ್ತಿರುವ ಕುರಿತು ಕೈಗೊಂಡಿರುವ ತನಿಖೆಯನ್ನು ಭದ್ರತಾಪಡೆಗಳು ಚುರುಕುಗೊಳಿಸಿವೆ.
ಕೆಲ ಖಾಸಗಿ ಶಾಲೆಗಳಲ್ಲಿ, ಮಾದಕದ್ರವ್ಯಗಳ ಬಳಕೆ ಹೆಚ್ಚುತ್ತಿದೆ ಎಂಬ ಬಗ್ಗೆಯೂ ವ್ಯಾಪಕ ಕಳವಳ ವ್ಯಕ್ತವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಮ್ಮು–ಕಾಶ್ಮೀರದ ಬೇರುಮಟ್ಟದಲ್ಲಿ ಉಗ್ರವಾದದ ಕುರಿತು ಸಂಕಥನಗಳನ್ನು ಪ್ರಚುರಪಡಿಸಲಾಗುತ್ತಿದೆ. ಇದರ ವಿರುದ್ಧದ ಹೋರಾಟದ ಭಾಗವಾಗಿ ಶಾಲೆಗಳಲ್ಲಿ ನಡೆಯುತ್ತಿರುವ ಇಂತಹ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುತ್ತಿದೆ. ಈ ಕುರಿತು ಖಾಸಗಿ ಶಾಲೆಗಳ ಆಡಳಿತ ಮಂಡಳಿಗೆ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ ಎಂಧು ಅಧಿಕಾರಿಗಳು ಹೇಳಿದ್ದಾರೆ.
ಭದ್ರತಾ ಪಡೆಗಳು ಮಾತ್ರವಲ್ಲ, ಈಗಾಗಲೇ ಪ್ರತ್ಯೇಕತಾವಾದದಿಂದ ದೂರವಾಗಿರುವ ಗುಂಪುಗಳಲ್ಲಿ ಕೂಡ ಈ ವಿದ್ಯಮಾನ ಆತಂಕ ಮೂಡಿಸಿದೆ.
‘ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ಆಚೆ ಕಡೆಯಿಂದ ನುಗ್ಗಿ ಬರುತ್ತಿರುವ ಧಾರ್ಮಿಕ ಉಗ್ರವಾದದ ಮತ್ತೊಂದು ಅಲೆಯು, ಶತಮಾನಗಳಿಂದ ಕಣಿವೆಯಲ್ಲಿ ನೆಲೆಯೂರಿರುವ ಸೂಫಿ ಪರಂಪರೆಯನ್ನು ನಾಶ ಮಾಡಲಿದೆಯೇ ಎಂಬ ಆತಂಕ ಕಾಡುತ್ತಿದೆ’ ಎಂದು ಮಾಜಿ ಪ್ರತ್ಯೇಕತಾವಾದಿಗಳು ಹೇಳುತ್ತಾರೆ.
ಕೆಲ ಸಂಸ್ಥೆಗಳು ಹಾಗೂ ‘ಅನಧಿಕೃತ’ ಮದರಸಾಗಳು ಕೂಡ ಯುವ ಸಮುದಾಯವನ್ನು ಉಗ್ರವಾದದತ್ತ ಸೆಳೆಯುವ ಕಾರ್ಯದಲ್ಲಿ ತೊಡಗಿವೆ ಎಂದು ಇವೇ ಮೂಲಗಳು ಹೇಳುತ್ತವೆ.
‘ಸೂಫಿ ಸಂತರು ಹಾಗೂ ಋಷಿಗಳ ಹೆಸರಿನಲ್ಲಿ ನಿರ್ಮಿಸಿರುವ ಶ್ರದ್ಧಾಕೇಂದ್ರಗಳಿಗೆ ಭೇಟಿ ನೀಡುವುದು, ಪ್ರಾರ್ಥನೆ ಸಲ್ಲಿಸುವುದು ಸೇರಿ ಪರಂಪರಾಗತವಾಗಿ ರೂಢಿಯಲ್ಲಿರುವ ಕಾಶ್ಮೀರಿ ಜನರ ಪದ್ಧತಿಗಳನ್ನು ಧಿಕ್ಕರಿಸುವಂತೆ ಪ್ರಚೋದಿಸಲಾಗುತ್ತಿದೆ. ಇಂತಹ ಪದ್ಧತಿಗಳ ಪಾಲನೆ ಇಸ್ಲಾಂ ಬೋಧನೆಗಳ ಉಲ್ಲಂಘನೆ ಎಂಬುದಾಗಿ ಬೋಧಿಸಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.
‘ಉಗ್ರರು ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡುತ್ತಿರುವುದು ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ. ಇದು, ಜಮ್ಮು–ಕಾಶ್ಮೀರದಲ್ಲಿನ ಭದ್ರತೆಗೆ ಹೊಸ ಸವಾಲಾಗಿ ಪರಿಣಿಮಿಸಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.
ಜಮ್ಮು–ಕಾಶ್ಮೀರದ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಲಾಗದ ರೀತಿಯಲ್ಲಿ ಹಾನಿ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಭವಿಷ್ಯದ ದಿನಗಳಿಗಾಗಿ ತಯಾರು ಮಾಡುತ್ತಿಲ್ಲ. ಕಿರುಕುಳ ಅಪಾಯದಿಂದ ಇಸ್ಲಾಂ ಮಾತ್ರ ರಕ್ಷಣೆ ನೀಡಬಲ್ಲದು ಎಂದು ಅವರು ನಂಬುವಂತೆ ಬೋಧಿಸಲಾಗುತ್ತಿದೆಭದ್ರತಾ ಪಡೆಗಳ ಅಧಿಕಾರಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.