ರಾಜ್ ಕುಮಾರ್ ಥಾಪಾ
ಜಮ್ಮು: ಪಾಕಿಸ್ತಾನದ ದಾಳಿಯಲ್ಲಿ ಹುತಾತ್ಮರಾಗಿರುವ ಜಮ್ಮು–ಕಾಶ್ಮೀರದ ಆಡಳಿತ ಸೇವಾ (ಜೆಕೆಎಎಸ್) ಅಧಿಕಾರಿ ರಾಜ್ ಕುಮಾರ್ ಥಾಪಾ (54) ಜನಾನುರಾಗಿಯಾಗಿದ್ದರು. ಸಾಮಾನ್ಯ ಜನರ ಸಂಕಷ್ಟಕ್ಕೆ ಮಿಡಿದು ನಿಜವಾದ ಜನಸೇವಕ ಎನಿಸಿಕೊಂಡಿದ್ದ ಥಾಪಾ ಅವರ ಸಾವಿಗೆ ಕೇಂದ್ರಾಡಳಿತ ಪ್ರದೇಶದ ಜನರು ಕಂಬನಿ ಮಿಡಿದಿದ್ದಾರೆ.
ಎಂಬಿಬಿಎಸ್ ಪದವೀಧರರಾಗಿರುವ ಥಾಪಾ, 2001ರಲ್ಲಿ ಜೆಕೆಎಎಸ್ ಸೇರ್ಪಡೆಗೊಂಡು, ಕಳೆದ ವರ್ಷ ರಜೌರಿ ಜಿಲ್ಲೆಗೆ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ಅದೇ ವರ್ಷ ಡಿಸೆಂಬರ್ 7ರಿಂದ 19ರ ಅವಧಿಯಲ್ಲಿ ಬದಹಾಲ್ ಗ್ರಾಮದಲ್ಲಿ 3 ಕುಟುಂಬಗಳ 17 ಮಂದಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾಗಿ ನಿಗೂಢವಾಗಿ ಮೃತಪಟ್ಟಿದ್ದರು. ಆ ಪ್ರಕರಣವನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದರು.
ರಜೌರಿಗೆ ನೇಮಕಗೊಳ್ಳುವ ಮುನ್ನ ಮಾಜಿ ಉಪ ಮುಖ್ಯಮಂತ್ರಿ ತಾರಾ ಚಂದ್ ಅವರ ಬಳಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ (ಒಎಸ್‌ಡಿ) 2009ರಿಂದ 2014ರವರೆಗೆ ಕಾರ್ಯನಿರ್ವಹಿಸಿದ್ದರು. ಜಮ್ಮು–ಕಾಶ್ಮೀರ ಕೌಶಲ ಅಭಿವೃದ್ಧಿ ಯೋಜನೆಯ ನಿರ್ದೇಶಕ, ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ವಿಶೇಷ ಕಾರ್ಯದರ್ಶಿ ರೀತಿಯ ಪ್ರಮುಖ ಹುದ್ದೆಗಳನ್ನೂ ಅವರು ನಿಭಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.