ADVERTISEMENT

ಸೋಪೋರ್‌ನಲ್ಲಿ ಉಗ್ರರ ದಾಳಿ: ಭದ್ರತಾ ಲೋಪ ಒಪ್ಪಿಕೊಂಡ ಕಾಶ್ಮೀರ ಪೊಲೀಸರು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 10:42 IST
Last Updated 30 ಮಾರ್ಚ್ 2021, 10:42 IST
ವಿಜಯಕುಮಾರ್
ವಿಜಯಕುಮಾರ್   

ಶ್ರೀನಗರ: ‘ಸೋಪೋರ್‌ನಲ್ಲಿ ಉಗ್ರರು ನಡೆಸಿದ ದಾಳಿಗೆ ಸಂಬಂಧಪಟ್ಟಂತೆ ಭದ್ರತಾ ಲೋಪವಾಗಿದೆ’ ಎಂದು ಜಮ್ಮು–ಕಾಶ್ಮೀರದ ಐಜಿಪಿ ವಿಜಯಕುಮಾರ್‌ ಹೇಳಿದ್ದಾರೆ.

ಭಾನುವಾರ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಮುನ್ಸಿಪಲ್‌ ಕೌನ್ಸಿಲರ್‌ಗಳು ಹಾಗೂ ಒಬ್ಬ ಕಾನ್‌ಸ್ಟೆಬಲ್‌ ಮೃತಪಟ್ಟಿದ್ದಾರೆ.

‘ಉಗ್ರರು ದಾಳಿ ನಡೆಸಿದ ವೇಳೆ ನಾಲ್ವರು ವೈಯಕ್ತಿಕ ಭದ್ರತಾ ಅಧಿಕಾರಿಗಳು (ಪಿಎಸ್‌ಒ) ಇದ್ದರು. ಈ ನಾಲ್ವರು ಅಧಿಕಾರಿಗಳು ತಕ್ಕ ಪ್ರತ್ಯುತ್ತರ ನೀಡಿದ್ದಿದ್ದರೆ ಉಗ್ರರ ಯತ್ನ ವಿಫಲವಾಗುತ್ತಿತ್ತು’ ಎಂದು ವಿಜಯಕುಮಾರ್ ಹೇಳಿದರು.

ADVERTISEMENT

‘ನಾಲ್ಕು ಜನ ಪಿಎಸ್‌ಒಗಳನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಉಗ್ರರಿಗೆ ಸ್ಥಳೀಯವಾಗಿ ನೆರವು ನೀಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ’ ಎಂದರು.

‘ಲಷ್ಕರ್‌–ಎ–ತಯಬಾದ ಉಗ್ರ ಮುದಸಿರ್‌ ಹಾಗೂ ವಿದೇಶಿ ವ್ಯಕ್ತಿ ಈ ದಾಳಿಯ ಸೂತ್ರಧಾರರು ಎಂಬುದನ್ನು ಬಂಧಿತ ಸ್ಥಳೀಯ ವ್ಯಕ್ತಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ’ ಎಂದೂ ಅವರು ಹೇಳಿದರು.

‘ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುವುದು. ಸೋಪೋರ್‌ನಲ್ಲಿ ನಡೆದ ದಾಳಿಗೆ ಕಾರಣರಾದವರನ್ನು ಬಂಧಿಸಲಾಗುವುದು ಇಲ್ಲವೇ ಹೊಡೆದುರುಳಿಸಲಾಗುವುದು’ ಎಂದೂ ವಿಜಯಕುಮಾರ್ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.